ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಉಳಿದೆರಡು ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಅಚ್ಚರಿಯ ಆಯ್ಕೆ ಎಂಬಂತೆ ಉಡುಪಿ ಮೂಲದ ಮುಂಬೈ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್(Tanush Kotian) ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆರ್. ಅಶ್ವಿನ್ ದಿಢೀರ್ ವಿದಾಯ ಘೋಷಿಸಿ ತವರಿಗೆ ಮರಳಿದ ಹಿನ್ನೆಲೆ ಈ ಅವಕಾಶ ಕೋಟ್ಯಾನ್‌ಗೆ ಲಭಿಸಿತು.
ಕರಾವಳಿ ಮೂಲದ ಕ್ರಿಕೆಟಿಗ
26 ವರ್ಷದ ತನುಷ್ ಕೋಟ್ಯಾನ್ ಉಡುಪಿ ಜಿಲ್ಲೆಯ ಪಾಂಗಾಳ ಮೂಲದವರು. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಆಲ್ರೌಂಡರ್ ಪ್ರದರ್ಶನ ತೋರಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ವಿದರ್ಭ ಎದುರಿನ ಫೈನಲ್ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತನುಷ್ ಕೋಟ್ಯಾನ್ ಪಾಂಗಾಳ ವಿಜಯಾ ಬ್ಯಾಂಕ್ ಬಳಿಯ ತುಳ್ಳಿಮಾರ್ ಹೌಸ್‌ನ ಕರುಣಾಕರ್ ಕೋಟ್ಯಾನ್ ಮತ್ತು ಹೆಜಮಾಡಿ ಕೋಡಿ ನಡಿಕುದ್ರು ಮಲ್ಲಿಕಾ ಕೋಟ್ಯಾನ್ ದಂಪತಿಯ ಪತ್ರನಾಗಿದ್ದಾರೆ. ಕಳೆದ 4 ವರ್ಷಗಳಿಂದ ಮುಂಬೈ ತಂಡದ ಪರ ಆಡುತ್ತಿದ್ದಾರೆ.
ಇದನ್ನೂ ಓದಿ R Ashwin: ʻನಾನೆಂದಿಗೂ ಅಭದ್ರತೆಯನ್ನು ಅನುಭವಿಸಿಲ್ಲʼ-ವಿದಾಯದ ಬಗ್ಗೆ ಅಶ್ವಿನ್ ಪ್ರತಿಕ್ರಿಯೆ!
ತನುಷ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 33 ಪಂದ್ಯಗಳನ್ನಾಡಿ 1525 ರನ್ ಮತ್ತು 101 ವಿಕೆಟ್ ಕಿತ್ತಿದ್ದಾರೆ. 2 ಶತಕ ಕೂಡ ಬಾರಿಸಿದ್ದಾರೆ. ಅಜೇಯ 120 ರನ್ ವೈಯಕ್ತಿಕ ಗರಿಷ್ಠ ಮೊತ್ತ. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 21 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ.
ಕೋಟ್ಯಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈನ ಉದಯೋನ್ಮುಖ ತಾರೆಯಾಗಿದ್ದಾರೆ. ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಕೋಟ್ಯಾನ್ 10 ಪಂದ್ಯಗಳಿಂದ 16.96 ಸರಾಸರಿಯಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದರು. ಅವರು 10 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 502 ರನ್ ಗಳಿಸಿದ್ದರು.
ತಂದೆಗೂ ಅಪಾರ ಕ್ರಿಕೆಟ್ ಕ್ರೇಜ್
ತನುಷ್ ಕೋಟ್ಯಾನ್ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಡಲು ಅವರ ತಂದೆ ಕರುಣಾಕರ್ ಕೋಟ್ಯಾನ್ ಕೂಡ ಪ್ರಮುಖ ಕಾರಣ. ಕರುಣಾಕರ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಮುಂಬಯಿ ಟಾಟಾ ನ್ಪೋರ್ಟ್ಸ್ನಲ್ಲಿ ಆಡುವ ಅವಕಾಶವನ್ನೂ ಕೂಡ ಪಡೆದಿದ್ದರು. ಆದರೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗದೇ ಇದ್ದಾಗ ಅವರು ಕೋಚಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ರಣಜಿಯಲ್ಲಿ ಅಂಪೈರ್ ಆಗಿ ತನ್ನ ಕ್ರಿಕೆಟ್ ಆಸಕ್ತಿಯನ್ನು ಮುಂದುವರಿದರು.