ದುಬಾೖ: ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಬ್ಬರದ ಬ್ಯಾಟಿಂಗ್ ಸಾಹಸ ರಾಜಸ್ಥಾನ್ ರಾಯಲ್ಸ್ ನಿಗದಿಪಡಿಸಿದ “ಟಾರ್ಗೆಟ್ 150’ನ್ನು ಮುಟ್ಟಲು ಸಾಧ್ಯವಾಯಿತು.
7 ವಿಕೆಟ್ ಪರಾಕ್ರಮದೊಂದಿಗೆ 7ನೇ ಗೆಲುವು ಸಾಧಿಸಿ ತನ್ನ ಅಂಕವನ್ನು 14ಕ್ಕೆ ಏರಿಸಿಕೊಂಡಿದೆ. ರಾಜಸ್ಥಾನ್ 5ನೇ ಸೋಲುಂಡು ನಿರ್ಗಮನದ ಸೂಚನೆ ನೀಡಿದೆ.
ಬುಧವಾರದ ಮುಖಾಮುಖೀಯಲ್ಲಿ ಅಬ್ಬರದ ಆರಂಭ ಪಡೆದ ರಾಜಸ್ಥಾನ್, ಕೊನೆಯಲ್ಲಿ ಕುಸಿತಕ್ಕೆ ಸಿಲುಕಿ 9 ವಿಕೆಟಿಗೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ 17.1 ಓವರ್ಗಳಲ್ಲಿ ಮೂರೇ ವಿಕೆಟಿಗೆ 153 ರನ್ ಬಾರಿಸಿತು.
ವಿರಾಟ್ ಕೊಹ್ಲಿ (25), ದೇವದತ್ತ ಪಡಿಕ್ಕಲ್ (22) ಸೇರಿಕೊಂಡು ಮೊದಲ ವಿಕೆಟಿಗೆ 5.2 ಓವರ್ಗಳಿಂದ 48 ಪೇರಿಸಿತು. 10 ರನ್ ಅಂತರದಲ್ಲಿ ನಿರ್ಗಮಿಸಿದ ಬಳಿಕ ಶ್ರೀಕರ್ ಭರತ್-ಗ್ಲೆನ್ ಮ್ಯಾಕ್ಸ್ವೆಲ್ 55 ಎಸೆತಗಳಿಂದ 69 ರನ್ ಒಟ್ಟುಗೂಡಿಸಿ ತಂಡಕ್ಕೆ ಆತಂಕ ಎದುರಾಗದಂತೆ ನೋಡಿಕೊಂಡರು. ಭರತ್ ಗಳಿಕೆ 35 ಎಸೆತ ಗಳಿಂದ 44 ರನ್ (3 ಬೌಂಡರಿ, 1 ಸಿಕ್ಸರ್). ಮ್ಯಾಕ್ಸ್ವೆಲ್ 50 ರನ್ ಹಾದಿಯಲ್ಲಿ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆಗೈದರು. 30 ಎಸೆತ ಎದುರಿಸಿದ ಮ್ಯಾಕ್ಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.
ರಾಜಸ್ಥಾನಕ್ಕೆ ಬ್ರೇಕ್
ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ಬಳಿಕ ಆರ್ಸಿಬಿಯ ಬಿಗಿಯಾದ ದಾಳಿಗೆ ಸಿಲುಕಿ ಒದ್ದಾಡತೊಡಗಿತು. ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್ಗೆ ಯಶಸ್ವಿ ಜೈಸ್ವಾಲ್ ಮತ್ತು ಎವಿನ್ ಲೆವಿಸ್ ಸ್ಫೋಟಕ ಆರಂಭದ ಮೂಲಕ ಭದ್ರ ಬುನಾದಿ ನಿರ್ಮಿಸಿದರು. ವಿಂಡೀಸ್ ತಾರೆ ಲೆವಿಸ್ ಪ್ರತಿ ಓವರ್ಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಆರ್ಸಿಬಿ ಬೌಲರ್ಗಳ ಮೇಲೆರಗಿ ಹೋದರು. ಅಂತೆಯೇ ಜೈಸ್ವಾಲ್ ರನ್ ಗಳಿಕೆಯೂ ಉತ್ತಮ ಲಯ ದಲ್ಲಿ ಸಾಗಿತು. ಇವರಿಬ್ಬರ ಅಮೋಘ ಬ್ಯಾಟಿಂಗ್ನಿಂದ ಪವರ್ ಪ್ಲೇ ಅವಧಿಯಲ್ಲಿ ರಾಜಸ್ಥಾನ್ ನೋಲಾಸ್ 56 ರನ್ ಕಲೆ ಹಾಕಿ ಉತ್ತಮ ಮೊತ್ತ ಪೇರಿಸುವ ಮುನ್ಸೂಚನೆ ನೀಡಿತು.
ಆರಂಭಿಕ ಜೋಡಿಯನ್ನು 8ನೇ ಓವರ್ನಲ್ಲಿ ಆಸೀಸ್ ವೇಗಿ ಡೇನಿಯಲ್ ಕ್ರಿಸ್ಟಿಯನ್ ಕೊನೆಗೂ ಬೇರ್ಪಡಿಸಿದರು. 22 ಎಸೆತಗಳಲ್ಲಿ 31 ರನ್ ಮಾಡಿದ ಜೈಸ್ವಾಲ್ ಸಿರಾಜ್ಗೆ ಕ್ಯಾಚ್ ನೀಡಿ ವಾಪಸಾದರು. ಜೈಸ್ವಾಲ್ ಜತೆ ಮೊದಲ ವಿಕೆಟಿಗೆ 77 ರನ್ಗಳ ಜತೆಯಾಟ ನಿರ್ವಹಿಸಿದ ಎವಿನ್ ಲೆವಿಸ್ ಅರ್ಧ ಶತಕ ಬಾರಿಸಿದರು (58 ರನ್, 5 ಬೌಂಡರಿ, 3 ಸಿಕ್ಸರ್). ಮೊತ್ತ »ನೂರಕ್ಕೆ ಏರಿದಾಗ ಎಡಗೈ ವೇಗಿ ಜಾರ್ಜ್ ಗಾರ್ಟನ್ಗೆ ವಿಕೆಟ್ ಒಪ್ಪಿಸಿದರು.
ಲೆವಿಸ್ ವಿಕೆಟ್ ಪತನದ ಬೆನ್ನಲ್ಲೇ ಆರ್ಸಿಬಿ ಬೌಲರ್ ಸಂಪೂರ್ಣ ಹಿಡಿತ ಸಾಧಿಸಿದರು. ಕೇವಲ 17 ರನ್ಗಳ ಅಂತರದಲ್ಲಿ 5 ವಿಕೆಟ್ ಕೆಡವಿದರು.
ಮಹಿಪಾಲ್ ಲೊನ್ರೋರ್ (3), ನಾಯಕ ಸಂಜು ಸ್ಯಾಮ್ಸನ್ (19), ರಾಹುಲ್ ತೇವಾಟಿಯಾ (2) ಬೇಗನೇ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್ನ ಹಾರ್ಡ್ ಹಿಟ್ಟರ್ ಲಿವಿಂಗ್ಸ್ಟೋನ್ (6), ರಿಯಾನ್ ಪರಾಗ್ (9) ಕೂಡ ಅಗ್ಗಕ್ಕೆ ಉದುರಿದರು.
ತಪ್ಪಿದ ಹ್ಯಾಟ್ರಿಕ್: ಹರ್ಷಲ್ ಪಟೇಲ್ ಅವರಿಗೆ ಅಂತಿಮ ಓವರ್ನಲ್ಲಿ ಮತ್ತೂಮ್ಮೆ ಹ್ಯಾಟ್ರಿಕ್ ಅವಕಾಶ ಎದುರಾಯಿತು. ಸತತ ಎಸೆತಗಳಲ್ಲಿ ಪರಾಗ್ ಹಾಗೂ ಮಾರಿಸ್ ವಿಕೆಟ್ ಕಿತ್ತರು. ಎರಡು ಎಸೆತಗಳ ಬಳಿಕ ಸಕಾರಿಯಾ ಔಟಾದರು. ಇದರೊಂದಿಗೆ ಈ ಸಾಲಿನ ಐಪಿಎಲ್ ಪಂದ್ಯಗಳ ಅಂತಿಮ ಓವರ್ನಲ್ಲಿ ಅತ್ಯಧಿಕ 10 ವಿಕೆಟ್ ಉರುಳಿಸಿದ ಹೆಗ್ಗಳಿಕೆ ಪಟೇಲ್ ಅವರದಾಯಿತು.
ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್
ಒಟ್ಟು(9 ವಿಕೆಟಿಗೆ) 149
ರಾಯಲ್ ಚಾಲೆಂಜರ್ ಬೆಂಗಳೂರು
(17.1 ಓವರ್ಗಳಲ್ಲಿ 3 ವಿಕೆಟಿಗೆ) 153