ಅಹಮದಾಬಾದ್: ಮೊದಲ ಏಕದಿನ ಪಂದ್ಯ(1000ನೇ )ದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಸುಲಭ ಗೆಲುವು ದಾಖಲಿಸಿದೆ.
ಬ್ಯಾಟಿಂಗ್ - ಬೌಲಿಂಗ್ನಲ್ಲಿ ಆಲ್ರೌಂಡ್ ಆಟವಾಡಿದ ರೋಹಿತ್ ಪಡೆ, ಕೆರಿಬಿಯನ್ನರಿಗೆ ಸೋಲಿನ ರುಚಿ ತೋರಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ನಾಯಕನ ನಿರ್ಧಾರವನ್ನ ಸಮರ್ಥಿಸಿದ ಬೌಲರ್ಗಳು, ಪ್ರವಾಸಿ ತಂಡ ಮೇಲೇಳದ ರೀತಿ ಆಘಾತ ನೀಡಿದರು. ಸಿರಾಜ್, ಸುಂದರ್ ಮತ್ತೊಂದೆಡೆ ಚಹಲ್ ಕೂಡ ತನ್ನ ಸ್ಪಿನ್ ಮೋಡಿ ಮೂಲಕ ಮಿಡಲ್ ಆರ್ಡರ್ ಕುಸಿತಕ್ಕೆ ಕಾರಣರಾದರು. ಪೂರನ್, ಪೊಲಾರ್ಡ್, ಬ್ರೂಕ್ಸ್ಗೆ ಗೇಟ್ಪಾಸ್ ನೀಡಲು ಯಶಸ್ವಿಯಾದರು.
ವಿಂಡೀಸ್ 79 ರನ್ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಆಸರೆಯಾಗಿದ್ದು ಜೇಸನ್ ಹೋಲ್ಡರ್ ಮತ್ತು ಫ್ಯಾಬಿಯನ್ ಅಲೆನ್. ಹೋಲ್ಡರ್ ಅರ್ಧಶತಕ, ಅಲೆನ್ 29 ರನ್ಗಳಿಸಿ 8ನೇ ವಿಕೆಟ್ಗೆ 78ರನ್ಗಳ ಕೊಡುಗೆ ನೀಡಿದರು. ಪರಿಣಾಮ ವಿಂಡೀಸ್ 150ರ ಗಡಿ ದಾಟಲು ನೆರವಾಯ್ತು. ಆದರೆ, ಈ ಇಬ್ಬರ ಆಟಕ್ಕೆ ಪ್ರಸಿದ್ಧ್, ಸುಂದರ್ ಬ್ರೇಕ್ ಹಾಕಿದರು. ಅಂತಿಮವಾಗಿ ವಿಂಡೀಸ್, 177ಕ್ಕೆ ಸರ್ವಪತನ ಕುಸಿತ ಕಂಡಿತು. ಚಹಲ್ 4, ಸುಂದರ್ 3, ಪ್ರಸಿದ್ಧ್ 2 ಮತ್ತು ಸಿರಾಜ್ 1 ವಿಕೆಟ್ ಪಡೆದು ಮಿಂಚಿದರು.
ವಿಂಡೀಸ್ ನೀಡಿದ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ, ಉತ್ತಮ ಆರಂಭವನ್ನೇ ಪಡೆಯಿತು. ಒಂದೆಡೆ ಇಶಾನ್ ಕಿಶನ್ ಎಚ್ಚರಿಕೆ ಆಟವಾಡುತ್ತಿದ್ದರೆ, ರೋಹಿತ್ ಶರ್ಮಾ ವೇಗವಾಗೇ ಬ್ಯಾಟ್ ಬೀಸಿ ತಮ್ಮ 44ನೇ ಅರ್ಧಶತಕವನ್ನ ಪೂರೈಸಿದರು. ಈ ಆರಂಭಿಕ ಜೋಡಿಯ ಅದ್ಭುತ ಆಟದಿಂದ ಮೊದಲ ವಿಕೆಟ್ 84ರನ್ಗಳು ಹರಿದು ಬಂದವು. ಬಳಿಕ ಕೊಹ್ಲಿ ಕೂಡ ಎರಡು ಬೌಂಡರಿ ಸಿಡಿಸಿ ಅದೇ ಓವರ್ನಲ್ಲಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ರೋಹಿತ್-ಕೊಹ್ಲಿ ಔಟಾದ ಬೆನ್ನಲ್ಲೇ ಇಶಾನ್ ಕಿಶನ್ ಕೂಡ ಅದೇ ದಾರಿ ಹಿಡಿದರು. ರಿಷಭ್ ಪಂತ್ ತನ್ನದಲ್ಲದ ತಪ್ಪಿಗೆ ರನ್ಔಟ್ ಆಗಿ ನಿರ್ಗಮಿಸಿದರು. ಸೂರ್ಯಕುಮಾರ್ ಮತ್ತು ಪದಾರ್ಪಣೆ ಮಾಡಿದ ದೀಪಕ್ ಹೂಡಾ ಜವಾಬ್ದಾರಿಯುತ ಆಟದ ಮೂಲಕ ಅರ್ಧಶತಕದ ಜೊತೆಯಾಟವಾಡಿದರು.
ಸೂರ್ಯರ ಅಜೇಯ 34 ರನ್, ಹೂಡಾರ ಅಜೇಯ 26 ರನ್ಗಳ ನೆರವಿನಿಂದ ಟೀಮ್ ಇಂಡಿಯಾ 6 ವಿಕೆಟ್ಗಳ ಗೆಲುವು ದಾಖಲಿಸಿತು.