Saturday, 7th September 2024

ಇಂಗ್ಲೆಂಡ್ ಪ್ರವಾಸ: ಟೀಂ ಇಂಡಿಯಾಗೆ ಕ್ವಾರಂಟೈನ್‌

ಮುಂಬೈ: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಎಂಟು ದಿನಗಳ ಕಠಿಣ ಕ್ವಾರಂಟೈನ್ ಮಂಗಳವಾರ ಆರಂಭವಾಗಿದೆ. ವಿಮಾನನಿಲ್ದಾಣ ಸಮೀಪದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ತಂಡಗಳು ಬಯೊಬಬಲ್ ಪ್ರವೇಶಿಸಿವೆ.

ಎಲ್ಲ ಆಟಗಾರರು ಮತ್ತು ಸಿಬ್ಬಂದಿಯನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಬಾರಿ ನೆಗೆಟಿವ್ ಬಂದವರು ಇಂಗ್ಲೆಂಡ್‌ಗೆ ತೆರಳುವರು. ಜೂನ್ ಎರಡರಂದು ತಂಡಗಳು ವಿಮಾನವೇರುವ ಸಾಧ್ಯತೆ ಇದೆ.

ಪುರುಷರ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯವನ್ನು ನ್ಯೂಜಿಲೆಂಡ್ ಎದುರು ಜೂನ್ 18ರಂದು ಆಡಲಿದೆ. ನಂತರ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಮಹಿಳೆಯರ ತಂಡದವರು ಜೂನ್ 16ರಿಂದ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ. ಟೆಸ್ಟ್‌ ನಂತರ ತಲಾ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿಗಳು ನಡೆಯಲಿವೆ.

ವೃದ್ಧಿಮಾನ್ ಸಹಾ ಮತ್ತು ಪ್ರಸಿದ್ಧ ಕೃಷ್ಣ ಎರಡು ದಿನಗಳ ಹಿಂದೆಯೇ ಬಯೊ ಬಬಲ್ ಪ್ರವೇಶಿಸಿದ್ದು ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಮತ್ತಿತರರು ಮಂಗಳ ವಾರ ಬಯೊಬಬಲ್‌ ಪ್ರವೇಶಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!