Saturday, 26th October 2024

Team India: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕನ್ನಡಿಗ ವೈಶಾಖ್‌ ಆಯ್ಕೆ; ಟೆಸ್ಟ್‌ನಲ್ಲಿ ಸ್ಥಾನ ಉಳಿಸಿಕೊಂಡ ರಾಹುಲ್‌

ಮುಂಬಯಿ: ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌(Border-Gavaskar trophy) ಟೆಸ್ಟ್‌ ಸರಣಿಗೆ ಭಾರತ ತಂಡ(Team India) ಪ್ರಕಟಿಸಲಾಗಿದೆ. ಅಭಿಮನ್ಯು ಈಶ್ವರನ್‌, ಐಪಿಎಲ್‌ ಸ್ಟಾರ್‌ಗಳಾದ ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ ಸ್ಥಾನ ಪಡೆದಿದ್ದಾರೆ. ಆದರೆ, ಅನುಭವಿ ಸ್ಪಿನ್ನರ್‌ಗಳಾದ ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಸೀಸ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿ ನವೆಂಬರ್​ 22ರಂದು ಶುರುವಾಗಲಿದ್ದು, ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದೆ. 2ನೇ ಟೆಸ್ಟ್​ ಡಿಸೆಂಬರ್​ 6ರಿಂದ 10ರವರೆಗೆ ಅಡಿಲೇಡ್​ನಲ್ಲಿ ನಿಗದಿಯಾಗಿದೆ. 1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ.

ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್‌ ಸರಣಿ ಜತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ(india vs south africa t20) ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ವೈಶಾಖ್‌ ಇದೀಗ ಟೀಮ್‌ ಇಂಡಿಯಾ ಪರ ಪದಾರ್ಪಣ ಪಂದ್ಯವನ್ನಾಡುವ ಕಾತರದಲ್ಲಿದ್ದಾರೆ.

ಇದನ್ನೂ ಓದಿ IND vs NZ Test : ಕಿವೀಸ್‌ಗೆ ಮುನ್ನಡೆ; ಸರಣಿ ಕಳೆದುಕೊಳ್ಳುವ ಆತಂಕದಲ್ಲಿ ಭಾರತ

ಟಿ20 ತಂಡವನ್ನು ಸೂರ್ಯಕುಮಾರ್‌ ಯಾದವ್‌ ಮುನ್ನಡೆಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನಾಡಿದಂತೆ ಹರಿಣಗಳ ವಿರುದ್ಧವೂ ಯಂಗ್‌ ಇಂಡಿಯಾ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್‌ ಫೈನಲಿಸ್ಟ್‌ಗಳಾದ ಕಾರಣ ಈ ಸರಣಿ ರೋಚಕವಾಗಿ ಸಾಗುವ ನಿರೀಕ್ಷೆಯಿದೆ. ಸರಣಿಯಲ್ಲಿ ಒಟ್ಟು 4 ಪಂದ್ಯಗಳು ನಡೆಯಲಿವೆ.

ಟೆಸ್ಟ್‌ ಸರಣಿಗೆ ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಸರ್ಫ‌ರಾಜ್‌ ಖಾನ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಪ್ರಸಿದ್ಧ್ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮ, ಜಿತೇಶ್ ಶರ್ಮ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್‌ ಸಿಂಗ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.