Saturday, 4th January 2025

ICC ODI rankings: ಮಹಿಳಾ ಒಡಿಐ ಶ್ರೇಯಾಂಕದಲ್ಲಿ ಕುಸಿದ ಸ್ಮೃತಿ ಮಂಧಾನಾ!

Team India Star Smriti Mandhana drops in ICC ODI rankings despite record feat in 2024

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಹೊರತಾಗಿಯೂ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ವುಮೆನ್‌ ಸ್ಮೃತಿ ಮಂಧಾನಾ ಅವರು ಮಹಿಳಾ ಏಕದಿನ ಶ್ರೇಯಾಂಕದಲ್ಲಿ (ICC ODI rankings) ಕುಸಿದಿದ್ದಾರೆ. ಸದ್ಯ ಅವರು ಮಹಿಳಾ ಒಡಿಐ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ವೋಲ್‌ವಾರ್ಟ್‌ ಹಾಗೂ ಶ್ರೀಲಂಕಾದ ಚಾಮರಿ ಅಟಪಟ್ಟು ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.

2024ರ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಮಂಧಾನಾ 12 ಇನಿಂಗ್ಸ್‌ಗಳಿಂದ 61.91ರ ಸರಾಸರಿಯಲ್ಲಿ 743 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರ ಜೊತೆಗೆ ಬೌಲಿಂಗ್‌ನಲ್ಲಿಯೂ ಒಂದು ವಿಕೆಟ್‌ ಅನ್ನು ಅವರು ಕಿತ್ತಿದ್ದಾರೆ.

ಕಳೆದ ವರ್ಷ ಜೂನ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಬೆಂಗಳೂರಿನಲ್ಲಿ ಸತತ ಎರಡು ಶತಕಗಳನ್ನು ಸಿಡಿಸುವ ಮೂಲಕ ಮಂಧಾನಾ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು. ನಂತರ ಅವರು ಇನ್ನೂ ಎರಡು ಶತಕಗಳನ್ನು ಬಾರಿಸಿದ್ದರು. ಇದರಲ್ಲಿ ನ್ಯೂಜಿಲೆಂಡ್‌ ವಿರುದ್ದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಒಂದು ಶತಕವನ್ನು ಬಾರಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿಯೂ ಸ್ಮೃತಿ ಮಂಧಾನಾ ಅವರು ಶತಕವನ್ನು ಬಾರಿಸಿದ್ದರು. ಆದರೂ ಭಾರತ ತಂಡ 0-3 ಅಂತರದಲ್ಲಿ ಸರಣಿಯನ್ನು ಸೋತಿತ್ತು. ಇದಕ್ಕೂ ಮುನ್ನ ಜೂನ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಆಲ್‌ರೌಂಡ್‌ ಪ್ರದರ್ಶನವನ್ನು ತೋರಿದ್ದರು. ಈ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 136 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು 18 ಮನಮೋಹಕ ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತನ್ನ ಪಾಲಿನ 50 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 325 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಬೌಲಿಂಗ್‌ನಲ್ಲಿಯೂ ಒಂದು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಭಾರತದ ನಾಲ್ಕು ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದರು.

ಅಕ್ಟೋಬರ್‌ 29 ರಂದು ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಶತಕವನ್ನು ಬಾರಿಸಿದ್ದರು. ಆ ಮೂಲಕ ಭಾರತದ ಪರ ವಿಶೇಷ ದಾಖಲೆಯನ್ನು ಬರೆದಿದ್ದರು. ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ವುಮೆನ್‌ ಎನಿಸಿಕೊಂಡಿದ್ದರು. ಅಹಮದಾಬಾದ್‌ನಲ್ಲಿ ನಡೆದಿದ್ದ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಅವರು ತಮ್ಮ ವೃತ್ತಿ ಜೀವನದ ಎಂಟನೇ ಒಡಿಐ ಶತಕವನ್ನು ಸಿಡಿಸಿದ್ದರು. ಇವರ ಶತಕದ ಬಲದಿಂದ ಭಾರತ ತಂಡ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು.

ತಮ್ಮ 88ನೇ ಒಡಿಐ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಮಂಧಾನಾ ಅವರು 122 ಎಸೆತಗಳಲ್ಲಿ 100 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ 233 ರನ್‌ಗಳ ಗುರಿಯನ್ನು 44.2 ಓವರ್‌ಗಳಲ್ಲಿ ಮುಟ್ಟಿತ್ತು. ಈ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು 63 ಎಸೆತಗಳಲ್ಲಿ 59 ರನ್‌ಗಳನ್ನು ಗಳಿಸಿದರು. ಈ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಭಾರತ ಮಹಿಳಾ ತಂಡ, ನ್ಯೂಜಿಲೆಂಡ್‌ ವಿರುದ್ದ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿತು.

ನ್ಯೂಜಿಲೆಂಡ್‌ ವಿರುದ್ಧ ಶತಕ ಸಿಡಿಸಿದ ಬಳಿಕ ಸ್ಮೃತಿ ಮಂಧಾನಾ ಅವರು ನಂತರ ಆಸ್ಟ್ರೇಲಿಯಾ ವಿರುದ್ದ ಮತ್ತೊಂದು ಶತಕವನ್ನು ಸಿಡಿಸಿದ್ದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 9 ಶತಕಗಳನ್ನು ಪೂರ್ಣಗೊಳಿಸಿದ್ದರು. ಒಡಿಐ ವೃತ್ತಿ ಜೀವನದಲ್ಲಿ ಅವರು 45ರ ಸರಾಸರಿಯಲ್ಲಿ 3960 ರನ್‌ಗಳನ್ನು ಕಲೆ ಹಾಕಿದ್ದಾರೆ.

ಈ ಸುದ್ದಿಯನ್ನು ಓದಿ: INDW vs AUSW: ಸ್ಮೃತಿ ಮಂಧಾನಾ ಶತಕ ವ್ಯರ್ಥ, ಆಸ್ಟ್ರೇಲಿಯಾ ಎದುರು ಭಾರತಕ್ಕೆ ಕ್ಲೀನ್‌ ಸ್ವೀಪ್‌ ಆಘಾತ!