Friday, 22nd November 2024

ಟಿ20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ: ಟೆವಾಟಿಯಾ, ಕಿಶನ್‌, ಯಾದವ್‌ಗೆ ಅವಕಾಶ

ನವದೆಹಲಿ: ಇಂಗ್ಲೆಂಡ್ ತಂಡದ ಭಾರತದ ಪ್ರವಾಸ ಈಗಾಗಲೇ ಆರಂಭವಾಗಿದ್ದು, ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯ ಗಳನ್ನು ಉಭಯ ತಂಡಗಳು ತಲಾ ಒಂದನ್ನು ಗೆದ್ದು, ಸರಣಿಯಲ್ಲಿ ಸಮಬಲದಲ್ಲಿದೆ. ಉಳಿದೆರಡು ಪಂದ್ಯಗಳು ಅಹಮದಾ ಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದೇ ವೇಳೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಇಂಗ್ಲೆಂಡ್‌ ವಿರುದ್ದ ಮುಂಬರುವ ಟಿ20 ಸರಣಿಗಾಗಿ ಶನಿವಾರ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ.

5 ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತವು ಶನಿವಾರ 19 ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿದ್ದು, ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಹಾಗೂ ರಾಹುಲ್ ಟೆವಾಟಿಯಾಗೆ ಅವಕಾಶ ನೀಡಲಾಗಿದೆ. ಮುಂಬೈ ಪರ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಸೂರ್ಯ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ ಕಿಶನ್ ಅವರು ರಿಷಭ್ ಪಂತ್‌ರೊಂದಿಗೆ 2ನೇ ವಿಕೆಟ್‌ಕೀಪರ್ ಆಗಿ ತಂಡಕ್ಕೆ ಸೇರಿದ್ದಾರೆ. ಐಪಿಎಲ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದ ಟೆವಾಟಿಯಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವರುಣ್‌ ಚಕ್ರವರ್ತಿ, ಟಿ.ನಟರಾಜನ್‌, ಭುವನೇಶ್ವರ ಕುಮಾರ್‌ ಹಾಗೂ ಕೀಪರ್‌ ರಿಷಬ್‌ ಪಂತ್‌ ಟಿ20 ಸರಣಿಗಾಗಿ ತಂಡಕ್ಕೆ ಮರಳಿದ್ದಾರೆ. ಟಿ-20 ಸರಣಿ ಅಹ್ಮದಾಬಾದ್ ನಲ್ಲಿ ಮಾರ್ಚ್ 12ರಿಂದ ಆರಂಭವಾಗಲಿದೆ.

ಭಾರತದ ಟಿ-20 ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್),ಯಜುವೇಂದ್ರ ಚಹಾಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ಟೆವಾಟಿಯಾ, ಟಿ.ನಟರಾಜನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.