ಸರಣಿ ಗೆಲ್ಲುವತ್ತ ಚಿತ್ತ, ಬೂಮ್ರಾಗೆ 100ನೇ ವಿಕೆಟ್
ದಿ ಓವಲ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ ಗಳ ಅಂತರದಿಂದ ಟೀಮ್ ಇಂಡಿಯಾಗೆ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲ್ಲಲು 368 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 92.2 ಓವರ್ ಗಳಲ್ಲಿ 210 ರನ್ ಗಳಿಸಿ ಆಲೌಟಾಯಿತು.
ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಬುಮ್ರಾ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಐದನೇ ಹಾಗೂ ಅಂತಿಮ ದಿನದಾಟವಾದ ಸೋಮವಾರ ಆತಿಥೇಯ ಇಂಗ್ಲೆಂಡ್ ತಂಡವು ವಿಕೆಟ್ ನಷ್ಟವಿಲ್ಲದೆ 77 ರನ್ ನಿಂದ ದ್ವಿತೀಯ ಇನಿಂಗ್ಸ್ ಆರಂಭಿ ಸಿತು. ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋರಿ ಬರ್ನ್ಸ್ (50) ಹಾಗೂ ಹಸೀಬ್ ಹಮೀದ್(63) ಅರ್ಧಶತಕ ಪೂರೈಸಿದರು. ಭೋಜನ ವಿರಾಮ ವೇಳೆಗೆ ರೋರಿ ಬರ್ನ್ಸ್ ಹಾಗೂ ಡೇವಿಡ್ ಮಲಾನ್(5) ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ಬಳಿಕ ಭಾರತವು ಕ್ಷಿಪ್ರವಾಗಿ 4 ವಿಕೆಟ್ ಗಳನ್ನು ಉರುಳಿಸಿ ಮೇಲುಗೈ ಸಾಧಿಸಿತು.
ಒಲೀ ಪೋಪ್(2) ಹಾಗೂ ಜಾನಿ ಬೈರ್ ಸ್ಟೋವ್(0)ವಿಕೆಟ್ ಗಳನ್ನು ಪಡೆದ ವೇಗದ ಬೌಲರ್ ಬುಮ್ರಾ ಇಂಗ್ಲೆಂಡ್ ಗೆ ಭಾರೀ ಆಘಾತ ನೀಡಿದರು. ಮೊಯಿನ್ ಅಲಿ ಖಾತೆ ತೆರೆಯದಂತೆ ರವೀಂದ್ರ ಜಡೇಜ ನೋಡಿ ಕೊಂಡರು. ನಾಯಕ ಜೋ ರೂಟ್(36) ಒಂದಷ್ಟು ಪ್ರತಿರೋಧ ತೋರಿ, ಶಾರ್ದೂಲ್ ಠಾಕೂರ್’ಗೆ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಅವರು ಕ್ರಿಸ್ ವೋಕ್ಸ್ ರನ್ನು 18 ರನ್ ಗೆ ನಿಯಂತ್ರಿಸಿದರು.
ಸೆ.10ರಿಂದ ಮ್ಯಾಂಚೆಸ್ಟರ್ ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್ ಹೆಚ್ಚು ಕುತೂಹಲ ಕೆರಳಿ ಸಿದೆ. ಭಾರತಕ್ಕೆ ಈ ಪಂದ್ಯ ಡ್ರಾಗೊಳಿಸಿದರೆ ಸರಣಿ ಒಲಿಯಲಿದೆ. ಇಂಗ್ಲೆಂಡ್ ಸರಣಿ ಸಮಬಲ ಗೊಳಿಸಲು ಈ ಪಂದ್ಯ ಗೆಲ್ಲಬೇಕಾಗುತ್ತದೆ.
1971ರ ಬಳಿಕ ಮೊದಲ ಬಾರಿ ಲಂಡನ್ ನ ದಿ ಓವಲ್ ನಲ್ಲಿ ಭಾರತವು ಜಯಭೇರಿ ಬಾರಿಸಿದೆ. 1984ರ ಬಳಿಕ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೀಗ ಇಂಗ್ಲೆಂಡ್ ನೆಲದಲ್ಲಿ 14 ವರ್ಷಗಳ ಬಳಿಕ ಸರಣಿ ಜಯಿಸುವತ್ತ ಕೊಹ್ಲಿ ಪಡೆ ಚಿತ್ತ ಹರಿಸಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗದ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬುಮ್ರಾ ಈ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ತನ್ನದೇ ನಾಡಿನ ಆಲ್‌ರೌಂಡರ್ ಕಪಿಲ್ ದೇವ್ ಹೆಸರಲ್ಲಿದ್ದ ದೀರ್ಘಕಾಲದ ದಾಖಲೆಯನ್ನು ಅಳಿಸಿ ಹಾಕಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆಯಲು ಕಪಿಲ್ ದೇವ್ 25 ಪಂದ್ಯಗಳನ್ನು ತೆಗೆದುಕೊಂಡರೆ, 27 ವರ್ಷದ ಜಸ್‌ಪ್ರೀತ್ ಬುಮ್ರಾ ತಮ್ಮ 24ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಓಲ್ಲೀ ಪೋಪ್(2) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬುಮ್ರಾ ಟೆಸ್ಟ್ ವಿಕೆಟ್‌ಗಳ ಶತಕ ಬಾರಿಸಿದರು.