ಮ್ಯಾಂಚೆಸ್ಟರ್: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (125*ರನ್) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (71ರನ್) ಜೋಡಿ ಭರ್ಜರಿ ಜತೆಯಾಟದ ನೆರವಿನಿಂದ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು.
ಈ ಮೂಲಕ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿ ತ್ತಲ್ಲದೇ, ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಯಾವುದೇ ಸರಣಿ ಸೋಲದೆ ಅಜೇಯವಾಗಿ ತವರಿಗೆ ವಾಪಸಾಯಿತು.
ಮತ್ತೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 45.5 ಓವರ್‌ಗಳಲ್ಲಿ 259 ರನ್ನಿಗೆ ಆಲೌಟ್ ಆಯಿತು. ಭಾರತ 42.1 ಓವರ್‌ಗಳಲ್ಲಿ 5 ವಿಕೆಟಿಗೆ 261 ರನ್ ಬಾರಿಸಿ ಅಸಾಮಾನ್ಯ ಬ್ಯಾಟಿಂಗ್ ಸಾಹಸಕ್ಕೆ ಸಾಕ್ಷಿಯಾಯಿತು.
ರಿಷಭ್ ಪಂತ್ ಚೊಚ್ಚಲ ಏಕದಿನ ಶತಕ ಬಾರಿಸಿ ಓಲ್ಡ್ ಟ್ರಾಫರ್ಡ್ ಹೀರೋ ಎನಿಸಿದರು. ಡೇವಿಡ್ ವಿಲ್ಲಿ ಅವರ ಓವರ್‌ನಲ್ಲಿ ಸತತ 5 ಬೌಂಡರಿ ಸೇರಿದಂತೆ 21 ರನ್ ಚಚ್ಚಿದರು. ಬಳಿಕ ರೂಟ್ ಎಸೆತವನ್ನು ರಿವರ್ಸ್ ಸ್ವೀಪ್ ಮೂಲಕ ಬೌಂಡರಿಗೆ ಬಡಿದಟ್ಟಿ ಭಾರತದ ಜಯಭೇರಿ ಮೊಳಗಿಸಿದರು. ಪಂತ್ ಗಳಿಕೆ 113 ಎಸೆತಗಳಿಂದ 125 ರನ್. 16 ಫೋರ್, 2 ಸಿಕ್ಸರ್‌ಗಳಿಂದ ಅವರ ಇನ್ನಿಂಗ್ಸ್ ರಂಗೇರಿಸಿಕೊಂಡಿತು.
ರೀಸ್ ಟಾಪ್ಲಿ ಟಾಪ್ ಕ್ಲಾಸ್ ಬೌಲಿಂಗ್ ಮೂಲಕ ಧವನ್, ರೋಹಿತ್ ಮತ್ತು ಕೊಹ್ಲಿ ವಿಕೆಟ್‌ಗಳನ್ನು 38 ರನ್ ಆಗುವಷ್ಟರಲ್ಲಿ ಉರುಳಿಸಿದರು. ಸೂರ್ಯಕುಮಾರ್ ಕೂಡ ಸಿಡಿಯಲು ವಿಫರಾದರು. 72 ರನ್ನಿಗೆ 4 ವಿಕೆಟ್ ಬಿತ್ತು. ಆಗ ಇಂಗ್ಲೆಂಡ್‌ಗೆ ಗೆಲುವಿನ ಅವಕಾಶ ಹೆಚ್ಚಿತ್ತು.
ಈ ಹಂತದಲ್ಲಿ ಜತೆಗೂಡಿದ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಅಮೋಘ ಜತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿ ದರು. 5ನೇ ವಿಕೆಟಿಗೆ 115 ಎಸೆತಗಳಿಂದ 133 ರನ್ ರಾಶಿ ಹಾಕಿ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿ ಯಾದರು. ಬೌಲಿಂಗ್‌ನಲ್ಲಿ 4 ವಿಕೆಟ್ ಉಡಾಯಿಸಿದ ಮಿಂಚಿದ ಪಾಂಡ್ಯ 55 ಎಸೆತಗಳಿಂದ 71 ರನ್ ಬಾರಿಸಿದರು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24ಕ್ಕೆ 4 ವಿಕೆಟ್ ಉಡಾಯಿಸಿದರು. ಇದು ಅವರ ಜೀವನ ಶ್ರೇಷ್ಠ ಸಾಧನೆ. 2016ರ ನ್ಯೂಜಿಲ್ಯಾಂಡ್ ಎದುರಿನ ಧರ್ಮಶಾಲಾ ಪದಾರ್ಪಣ ಪಂದ್ಯದಲ್ಲಿ 31ಕ್ಕೆ 3 ವಿಕೆಟ್ ಉರುಳಿಸಿದ್ದು ಪಾಂಡ್ಯ ಅವರ ಈವರೆಗಿನ ಅತ್ಯುತ್ತಮ ಬೌಲಿಂಗ್ ಆಗಿತ್ತು.
ಬೆನ್ನು ನೋವಿನಿಂದಾಗಿ ಹೊರಗುಳಿದ ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಬಂದ ಸಿರಾಜ್ ತಮ್ಮ ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೊ ಮತ್ತು ಜೋ ರೂಟ್ ಅವರನ್ನು ಸೊನ್ನೆಗೆ ಉರುಳಿಸಿ ಭಾರತಕ್ಕೆ ಕನಸಿನ ಆರಂಭ ಒದಗಿಸಿದರು. ಸ್ಪಿನ್ನರ್ ಚಹಲ್ ಕೆಳ ಕ್ರಮಾಂಕದ 3 ವಿಕೆಟ್ ಕೆಡವಿದರು.
ಮೂರೂ ಬೌಲರ್ ಓವರ್ ಒಂದರಲ್ಲಿ ಇಬ್ಬರನ್ನು ಔಟ್ ಮಾಡಿದ್ದು ಈ ಪಂದ್ಯದ ವಿಶೇಷ. ಸಿರಾಜ್ ಬಳಿಕ ಈ ಪರಾಕ್ರಮ ತೋರಿದವರು ಹಾರ್ದಿಕ್ ಪಾಂಡ್ಯ. ಪಂದ್ಯದ 37ನೇ ಓವರ್‌ನಲ್ಲಿ ಅವರು ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಜಾಸ್ ಬಟ್ಲರ್ ವಿಕೆಟ್ ಉಡಾಯಿಸಿದರು. ಚಹಲ್ ಎಸೆದ ಅಂತಿಮ ಓವರ್‌ನಲ್ಲಿ ಕ್ರೆಗ್ ಓವರ್ಟನ್ ಮತ್ತು ರೀಸ್ ಟಾಪ್ಲಿ ಪೆವಿಲಿಯನ್ ಸೇರಿ ಕೊಂಡರು.
ರೀಸ್ ಟಾಪ್ಲೆ ಮಾರಕ ದಾಳಿಗೆ ನಲುಗಿದ ಭಾರತ ತಂಡ 38 ರನ್ ಪೇರಿಸು ವಷ್ಟರಲ್ಲಿ ನಾಯಕ ರೋಹಿತ್ ಶರ್ಮ (17), ಶಿಖರ್ ಧವನ್ (1) ಹಾಗೂ ವಿರಾಟ್ ಕೊಹ್ಲಿ (17) ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ (16) ನಿರಾಸೆ ಮೂಡಿಸಿದರು. 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಭಾರತ ಸೋಲಿನತ್ತ ಮುಖಮಾಡಿತು. ಈ ವೇಳೆ ಜತೆಯಾದ ಪಾಂಡ್ಯ ಹಾಗೂ ರಿಷಭ್ ಪಂತ್ ಜೋಡಿ ಇಂಗ್ಲೆಂಡ್ ಬೌಲರ್‌ಗಳಿಗೆ ತಿರುಗೇಟು ನೀಡಿತು.
ಇಂಗ್ಲೆಂಡ್: 45.5 ಓವರ್‌ಗಳಲ್ಲಿ 259 (ಜೋಸ್ ಬಟ್ಲರ್ 60, ಮೊಯಿನ್ ಅಲಿ 34, ಕ್ರೇಗ್ ಓವರ್‌ಟನ್ 32, ಹಾರ್ದಿಕ್ ಪಾಂಡ್ಯ 24ಕ್ಕೆ 4, ಯಜುವೇಂದ್ರ ಚಾಹಲ್ 60ಕ್ಕೆ 3, ಮೊಹಮದ್ ಸಿರಾಜ್ 66ಕ್ಕ 2), ಭಾರತ: 42.1 ಓವರ್‌ಗಳಲ್ಲಿ 5 ವಿಕೆಟ್‌ಗೆ 261 (ರಿಷಭ್ ಪಂತ್ 125*, ಹಾರ್ದಿಕ್ ಪಾಂಡ್ಯ 71, ರೀಸ್ ಟಾಪ್ಲೆ 35ಕ್ಕೆ 3).