ಬೆಂಗಳೂರು: ಇದೇ ದಿನ 22 ವರ್ಷಗಳ ಹಿಂದೆ (ಫೆ. 7, 1999) ಭಾರತದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಟೆಸ್ಟ್ ಪಂದ್ಯದ ಇನ್ನಿಂಗ್ಸ್ವೊಂದರಲ್ಲಿ ಎಲ್ಲ 10 ವಿಕೆಟ್ಗಳನ್ನು ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ ಅವಿಸ್ಮರಣೀಯ ಸಾಧನೆ ಮಾಡಿದ್ದರು. ಈ ಮೂಲಕ ಇಂಗ್ಲೆಂಡ್ನ ಮಾಜಿ ಬೌಲರ್ ಜಿಮ್ ಲೇಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ದಾಖಲೆಗೆ ಭಾಜನವಾದರು.
1990ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ಪದಾರ್ಪಣೆ ಮಾಡಿರುವ ಕರ್ನಾಟಕದ ಹೆಮ್ಮೆಯ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಾಪ್ 3 ಬೌಲರ್ಗಳ ಪಟ್ಟಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಬಳಿಕ ಅನಿಲ್ ಕುಂಬ್ಳೆ ಗುರುತಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲೂ ಶತಕ ಸಾಧನೆ ಮಾಡಿರುವ ಅನಿಲ್ ಕುಂಬ್ಳೆ, ಭಾರತದ ಪಾಲಿಗೆ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ಗಳನ್ನು ಕಬಳಿಸಿದ್ದಾರೆ.