Sunday, 12th January 2025

Yograj Singh: ಕಪಿಲ್‌ ದೇವ್‌ ತಲೆಗೆ ಗುಂಡಿಕ್ಕಲು ಮುಂದಾಗಿದ್ದ ಯುವರಾಜ್‌ ಸಿಂಗ್‌ ತಂದೆ; ಕಾರಣ ಏನು?

ಮುಂಬಯಿ: ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅವರನ್ನು ಸದಾ ದೂರುವ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ (Yuvraj Singh) ತಂದೆ ಯೋಗರಾಜ್‌ ಸಿಂಗ್‌ (Yograj Singh) ಅವರು ಇದೀಗ ತಮ್ಮ ಸಹ ಆಟಗಾರ, ಮಾಜಿ ನಾಯಕ ಕಪಿಲ್‌ ದೇವ್‌(Kapil Dev) ಬಗ್ಗೆ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಕಪಿಲ್ ದೇವ್ ಅವರ ತಲೆಗೆ ಗುಂಡಿಕ್ಕಲು ಅವರ ಮನೆಗೆ ಹೋಗಿದ್ದೆ ಎಂದು ಹೇಳಿದ್ದಾರೆ.

ಸಮ್ದೀಶ್ ಭಾಟಿಯಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್ ಸಿಂಗ್, ‘ಕಪಿಲ್ ದೇವ್ ಭಾರತ, ಉತ್ತರ ವಲಯ ಮತ್ತು ಹರಿಯಾಣದ ನಾಯಕರಾದಾಗ, ಅವರು ನನ್ನನ್ನು ಯಾವುದೇ ಕಾರಣವಿಲ್ಲದೆ ತಂಡದಿಂದ ಕೈಬಿಟ್ಟರು, ಇದರಿಂದ ಕೋಪಗೊಂಡ ನಾನು ಪಿಸ್ತೂಲ್ ತೆಗೆದುಕೊಂಡು ನೇರವಾಗಿ ಕಪಿಲ್ ದೇವ್ ಅವರನ್ನು ಕೊಲ್ಲಲು ಅವರ ಮನೆಗೆ ಹೋಗಿದ್ದೆ’ ಎಂಬ ಆಘಾತಕಾರಿ ವಿಚಾರವನ್ನು ತಿಳಿಸಿದರು.

‘ನನ್ನ ಪತ್ನಿ ಶಬ್ನಂ (ಯುವಿಯ ತಾಯಿ) ನಾನು ಕಪಿಲ್‌ಗೆ ಪ್ರಶ್ನೆಗಳನ್ನು ಕೇಳಬೇಕೆಂದು ಬಯಸಿದ್ದಳು. ಆದರೆ ನಾನು ಆತನಿಗೆ(ಕಪಿಲ್‌ಗೆ) ಪಾಠ ಕಲಿಸುತ್ತೇನೆ ಎಂದು ಅವಳಿಗೆ ಹೇಳಿ ಕಪಿಲ್‌ ಮನೆಗೆ ತೆರಳಿದೆ. ಈ ವೇಳೆ ಕಪಿಲ್‌ ತನ್ನ ತಾಯಿಯೊಂದಿಗೆ ಹೊರಬಂದ ಕಾರಣ ಬಚಾವಾದ’ ಎಂದು ಹೇಳಿದರು.

ಕಪಿಲ್ ದೇವ್ ಮತ್ತು ಬಿಷನ್ ಸಿಂಗ್ ಬೇಡಿ ಅವರ ರಾಜಕೀಯದ ಕಾರಣದಿಂದ ಉತ್ತರ ವಲಯದಿಂದ ಕೈಬಿಟ್ಟ ನಂತರ, ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ನಿರ್ಧರಿಸಿದಾಗಿ ಯೋಗರಾಜ್ ಬಹಿರಂಗಪಡಿಸಿದ್ದಾರೆ. ಸುನಿಲ್ ಗವಾಸ್ಕರ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರಿಂದ ಹಿರಿಯ ಆಟಗಾರರು ನನ್ನನ್ನು ಕೈಬಿಟ್ಟರು ಎಂದರು.

ಬಿಷನ್ ಸಿಂಗ್ ಬೇಡಿ ಅವರ ಬಗ್ಗೆಯೂ ಯೋಗರಾಜ್‌ ಸಿಂಗ್‌ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ‘ಬಿಷನ್ ಸಿಂಗ್ ಬೇಡಿಯೂ ನನ್ನ ವಿರುದ್ಧ ಸಂಚು ರೂಪಿಸಿದ್ದರು. ನಾನು ಬಿಷನ್ ಸಿಂಗ್ ಬೇಡಿಯನ್ನು ಕ್ಷಮಿಸಿಲ್ಲ. ನನ್ನನ್ನು ತಂಡದಿಂದ ಕೈಬಿಟ್ಟಾಗ ನಾನು ಆಯ್ಕೆಗಾರರಲ್ಲಿ ಒಬ್ಬರಾದ ರವೀಂದ್ರ ಚಡ್ಡಾ ಬಳಿ ಮಾತನಾಡಿದ್ದೆ, ಈ ವೇಳೆ ಅವರು ನೀನು ಬಿಷನ್ ಸಿಂಗ್ ಬೇಡಿ ನನ್ನನ್ನು ಸುನಿಲ್ ಗವಾಸ್ಕರ್ ಅವರ ಆಪ್ತ ಎಂದು ಭಾವಿಸಿದ್ದರು. ಜತೆಗೆ ನಾನು ಮುಂಬೈನಲ್ಲಿ ಕ್ರಿಕೆಟ್ ಆಡುತ್ತಿದ್ದೇನೆ ಎಂದು ಅವರು ನನಗೆ ಹೇಳಿದರು ಎಂದು ಯೋಗರಾಜ್‌ ಸಿಂಗ್‌ ಆರೋಪಿಸಿದ್ದಾರೆ.

ಮಧ್ಯಮ ವೇಗಿಯಾಗಿದ್ದ ತಂದೆ ಯೋಗರಾಜ್‌ ಸಿಂಗ್‌ ಭಾರತವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಒಂದು ಕಾಲದಲ್ಲಿ ಕಪಿಲ್‌ ದೇವ್‌ ಅವರ ಬೌಲಿಂಗ್‌ ಜತೆಗಾರನಾಗಿದ್ದರು. ಉತ್ತಮ ಕ್ಷೇತ್ರರಕ್ಷಕರೂ ಆಗಿದ್ದರು.

Leave a Reply

Your email address will not be published. Required fields are marked *