ಮುಂಬಯಿ: 2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ 7 ಪದಕ ಗೆದ್ದ ಭಾರತದ ಮೇಲೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಭಾರೀ ನಿರೀಕ್ಷೆ ಇರಿಸಲಾಗಿತ್ತು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆ(ಟಾಪ್ಸ್)ಗೆ ಹಣಕಾಸು ನಿಧಿಯನ್ನು ಹೆಚ್ಚಿಸಿತ್ತು. ಪ್ಯಾರಿಸ್ ಒಲಿಂಪಿಕ್ಸ್ನ ವಿದೇಶಿ ತರಬೇತಿಗೆ 17.9 ಕೋಟಿ ರೂ. ವ್ಯಯಿಸಿತ್ತು. ಆದರೆ ನಿರೀಕ್ಷೆಗಳೆಲ್ಲ ಹುಸಿಯಾಗಿತ್ತು. ಕೇವಲ 6 ಪದಕ ಮಾತ್ರ ಒಲಿದಿತ್ತು. ಇದೇ ಕಾರಣದಿಂದ ಟಾಪ್ಸ್ಗೆ ಹಣಕಾಸು ಸಹಾಯ ಕಡಿತಗೊಳಿಸಲು ಕೇಂದ್ರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಒಂದು ಅದಮ್ಯ ಕನಸಿನೊಂದಿಗೆ 2014ರ ಸೆಪ್ಟಂಬರ್ನಲ್ಲಿ ನೆಟ್ಟ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಂ(TOPS) ಪದಕ ಗೆಲ್ಲಬಲ್ಲ ಪ್ರತಿಯೊಬ್ಬ ಕ್ರೀಡಾಪಟುವಿಗೆ ಮಾಸಿಕ 50,000 ರೂ. ವರೆಗಿನ ಭತ್ತೆ ಜತೆಗೆ ವಿಶ್ವದರ್ಜೆಯ ತರಬೇತಿ ಪಡೆಯುವ, ವಿಶ್ವದರ್ಜೆಯ ಕ್ರೀಡಾ ಸಾಮಗ್ರಿಗಳನ್ನು ಹೊಂದುವ ಅನುಕೂಲವನ್ನು ಈ ಯೋಜನೆಯಡಿ ಕಲ್ಪಿಸಲಾಯಿತು. ಟೋಕಿಯೊ ಒಲಿಂಪಿಕ್ಸ್ ವೇಳೆ ಟಾಪ್ಸ್ ಯೋಜನೆಗಾಗಿ ಸುಮಾರು 765 ಕೋಟಿ ರೂ. ಮೀರಿ ಖರ್ಚು ಮಾಡಿತ್ತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇದಕ್ಕಿಂತಲೂ ಹೆಚ್ಚಿನ ಹಣ ಖರ್ಚುಮಾಡಿತ್ತು.
ಇದನ್ನೂ ಓದಿ IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ
ಸದ್ಯ ಟಾಪ್ಸ್ ಯೋಜನೆಯಡಿ ದೇಶಾದ್ಯಂತ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಆದರೆ ಈ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ನಿರ್ದಿಷ್ಟ ಮಾನದಂಡಕ್ಕೆ ಅನುಸಾರವಾಗಿ ಪ್ರದರ್ಶನ ನೀಡುವ ಅಥ್ಲೀಟ್ಗಳಿಗೆ ಮಾತ್ರ ಟಾಪ್ಸ್ ಯೋಜನೆಯಡಿ ಆರ್ಥಿಕ ಸಹಾಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಟಾಪ್ಸ್ ಯೋಜನೆಯನ್ನು ನಿಯಂತ್ರಿಸುವ ಮಿಷನ್ ಒಲಿಂಪಿಕ್ ಸೆಲ್(ಎಂಒಸಿ) ಸಮಿತಿಯು ಈ ಬಗ್ಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಭಾರತೀಯ ಕ್ರೀಡಾ ರಂಗಕ್ಕೆ ಹೊಸ ಕಾಯಕಲ್ಪ ನೀಡಲು ನಿರ್ಧರಿಸಿ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಾಪ್ಸ್) ಸ್ಕೀಂ ಯೋಜನೆ ಜಾರಿಗೊಳಿಸಿತು. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಕ್ರೀಡಾಳುಗಳನ್ನು ಆಯ್ಕೆ ಮಾಡಿ, ಅವರಿಗೆ ಉನ್ನತ ಮಟ್ಟದ ತರಬೇತಿ, ಸೌಕರ್ಯಗಳನ್ನು ಕಲ್ಪಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು.