Wednesday, 25th December 2024

U19 Women’s T20 Asia Cup: ಫೈನಲ್‌ ಪ್ರವೇಶಿಸಿದ ಭಾರತ

ಕೌಲಾಲಂಪುರ್: ಇಲ್ಲಿ ನಡೆಯುತ್ತಿರುವ U19 ಮಹಿಳೆಯರ T20 ಏಷ್ಯಾ ಕಪ್ ಟೂರ್ನಿಯಲ್ಲಿ(U19 Women’s T20 Asia Cup) ಭಾರತ ಮಹಿಳಾ ತಂಡ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಈ ಸಾಧನೆಗೈದಿತು. ಆಯುಷಿ ಶುಕ್ಲಾ ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್‌ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 98 ರನ್‌ಗೆ ಆಲೌಟ್‌ ಆಯಿತು. ಘಾತಕ ಬೌಲಿಂಗ್‌ ದಾಳಿ ನಡೆಸಿದ ಆಯುಷಿ ಶುಕ್ಲಾ ನಾಲ್ಕು ಓವರ್‌ ಬೌಲಿಂಗ್‌ ನಡೆಸಿ ಕೇವಲ 10 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಉರುಳಿಸಿದರು. ಪರುಣಿಕಾ ಸಿಸೋಡಿಯಾ 2 ವಿಕೆಟ್‌ ಪಡೆದರು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ 14.5 ಓವರ್‌ಗಳಲ್ಲಿ 6 ವಿಕೆಟ್‌ಗೆ 102 ರನ್‌ ಬಾರಿಸಿ ಗೆಲುವು ಸಾಧಿಸಿತು.

ಭಾರತ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದವರೆಂದರೆ, ಗೊಂಗಡಿ ತ್ರಿಷಾ(32) ಮತ್ತು ಜಿ ಕಮಲಿನಿ(28). ನಾಯಕಿಯಾಗಿರುವ ಕನ್ನಡತಿ ನಿಕಿ ಪ್ರಸಾದ್‌ 3 ರನ್‌ ಗಳಿಸಿ ನಾಯಕಿಯ ಆಟವಾಡುವಲ್ಲಿ ವಿಫಲರಾದರು. ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಬಾಂಗ್ಲಾ ತಂಡ ನೇಪಾಳ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತು.

ವಿಶ್ವ ದಾಖಲೆ ಸರಿಗಟ್ಟಿದ ರಿಚಾ ಘೋಷ್‌

ಗುರುವಾರ ರಾತ್ರಿ ನಡೆದಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧದ ಅಂತಿಮ ಮಹಿಳಾ ಟಿ20 ಪಂದ್ಯದಲ್ಲಿ ಭಾರತ 60 ರನ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿ ಜಯ ಸಾಧಿಸಿತ್ತು. ಇದೇ ಇದೇ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಯುವ ಆಟಗಾರ್ತಿ ರಿಚಾ ಘೋಷ್‌(Richa Ghosh) ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ರಿಚಾ ಅವರು ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸುವ ಮೂಲಕ ಈ ಸಾಧನೆಗೈದ ಭಾರತ ಮೊದಲ ಮತ್ತು ಒಟ್ಟಾರೆಯಾಗಿ ವಿಶ್ವದ ಮೂರನೇ ಆಟಗಾರ್ತಿ ಎನಿಸಿಕೊಂಡರು. ರಿಚಾಗೂ ಮುನ್ನ ನ್ಯೂಜಿಲ್ಯಾಂಡ್‌ನ ನಾಯಕಿ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಫೋಬೆ ಲಿಚ್‌ಫೀಲ್ಡ್ ಕೂಡ ತಲಾ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದೀಗ ರಿಚಾ ಕೂಡ 18 ಎಸೆತಗಳಿಂದ ಅರ್ಧಶತಕ ಬಾರಿಸಿ ಜಂಟಿ ದಾಖಲೆ ನಿರ್ಮಿಸಿದರು. ಒಟ್ಟು 21 ಎಸೆತ ಎದುರಿಸಿದ ರಿಚಾ ಘೋಷ್‌ 5 ಸಿಕ್ಸರ್‌ ಮತ್ತು 3 ಬೌಂಡರಿ ನೆರವಿನಿಂದ 54 ರನ್‌ ಬಾರಿಸಿದರು.