Friday, 22nd November 2024

ಉಸ್ಮಾನ್ ಖವಾಜಗೆ ವೀಸಾ ಸಮಸ್ಯೆ

ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರಯಾಣ ಕೈಗೊಂಡಿದೆ. ಆದರೆ ಆಸ್ಟ್ರೇಲಿ ಯಾದ ಓರ್ವ ಆಟಗಾರನಿಗೆ ವೀಸಾ ಸಮಸ್ಯೆಯುಂಟಾಗಿದ್ದು ಪ್ರಯಾಣಕ್ಕೆ ಅವಕಾಶ ದೊರೆತಿಲ್ಲ.

ಆಸ್ಟ್ರೇಲಿಯನ್ ಕ್ರಿಕೆಟ್ ಅವಾರ್ಡ್ಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಬಳಿಕ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿರುವ ಆಟಗಾರರು ಭಾರತದ ವಿಮಾನ ಹತ್ತಿದ್ದಾರೆ.

ವೀಸಾ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿರುವ ಆಟಗಾರ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ. ಭಾರತದಿಂದ ವೀಸಾಗೆ ಅನುಮೋದನೆ ದೊರೆತಿಲ್ಲವಾದ ಕಾರಣ ಉಸ್ಮಾನ್ ಖವಾಜ ತವರಿನಲ್ಲಿಯೇ ಅನುಮತಿಗಾಗಿ ಕಾದಿದ್ದಾರೆ.

ಉಸ್ಮಾನ್ ಖವಾಜ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿದ್ದು ಸ್ಥಿರ ಪ್ರದರ್ಶನ ನೀಡುತ್ತಿರುವ ಖವಾಜ ಕಳೆದ ಹಲವು ಸರಣಿಗಳಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಇದರ ಪರಿಣಾವಾಗಿ ಆಸ್ಟ್ರೇಲಿಯನ್ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಖವಾಜ ಕಳೆದ ವರ್ಷ ನಿಧನರಾದ ಶೇನ್ ವಾರ್ನ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಅವರಿಗಿಂತ ಹೆಚ್ಚಿನ ವೋಟ್ ಪಡೆದು ಈ ಪ್ರಶಸ್ತಿ ಗೆದ್ದಿದ್ದಾರೆ ಖವಾಜ.ಇನ್ನು ವೀಸಾ ಸಮಸ್ಯೆಯಿಂದಾಗಿ ಭಾರತಕ್ಕೆ ಆಸ್ಟ್ರೇಲಿಯಾ ತಂಡದ ಜೊತೆಗೆ ಪ್ರಯಾಣಿಸಲು ಸಾಧ್ಯವಾಗದ ವಿಚಾರವನ್ನು ಸ್ವತಃ ಉಸ್ಮಾನ್ ಖವಾಜ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಜನವರಿ 31ರಂದು ಭಾರತಕ್ಕೆ ಪ್ರಯಾಣ ಆರಂಭಿಸಿದೆ. ಸದ್ಯ ವೀಸಾಗಾಗಿ ಕಾದಿರುವ ಖವಾಜ ಫೆಬ್ರವರಿ 2 ಗುರುವಾರದಂದು ಪ್ರಯಾಣ ನಡೆಸುವ ನಿರೀಕ್ಷೆಯಿದೆ. ಪಾಕಿಸ್ತಾನ ಮೂಲದ ಉಸ್ಮಾನ್ ಖವಾಜ 2011ರಲ್ಲಿಯೂ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ವೀಸಾ ಸಮಸ್ಯೆಗೆ ಒಳಗಾಗಿದ್ದರು.ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದ್ದು ಅದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಮೂರನೇ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಯಾದರೆ ಅಂತಿಮ ಟೆಸ್ಟ್ ಪಂದ್ ಅಹ್ಮದಾಬಾದ್‌ನಲ್ಲಿ ನಡೆಯಲಿದೆ

ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್