Thursday, 26th December 2024

Sameer Rizvi: ‘202, 201, 153, 137*’-ಕೇವಲ 8 ದಿನಗಳಲ್ಲಿ 728 ರನ್‌ ಸಿಡಿಸಿದ ಸಮೀರ್‌ ರಿಝ್ವಿ!

Uttar Pradesh’s Sameer Rizvi smashes records in U23 One Day after Vijay Hazare Trophy snub

ನವದೆಹಲಿ: ವಿಜಯ್ ಹಜಾರೆ ಟ್ರೋಫಿ ತಂಡದಿಂದ ಹೊರಬಿದ್ದ ನಂತರ ಉತ್ತರ ಪ್ರದೇಶದ ಸಮೀರ್ ರಿಝ್ವಿ(Sameer Rizvi) ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಘರ್ಜಿಸುತ್ತಿದ್ದಾರೆ. 23ರ ವಯೋಮಿತಿ ಒಳಗಿನವರ ಏಕದಿನ ರಾಜ್ಯ ಎ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ರಿಝ್ವಿ ಮಿಂಚುತ್ತಿದ್ದಾರೆ. ಬುಧವಾರ ವಿದರ್ಭ ವಿರುದ್ಧ ಅಜೇಯ 202 ರನ್‌ಗಳನ್ನು ಸಿಡಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. 21ನೇ ವಯಸ್ಸಿನ ಸಮೀರ್, ಕಳೆದ 8 ದಿನಗಳಲ್ಲಿ ಎರಡು ದ್ವಿಶತಕಗಳ ಜೊತೆಗೆ ಎರಡು ಶತಕಗಳನ್ನು ಬಾರಿಸಿದ್ದಾರೆ.

ಬರೋಡಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಮೀರ್ ರಿಝ್ವಿ, ತಮ್ಮ ತಂಡದ ಪರ 13ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದರು. ಯುಪಿ ತಂಡದ ಆರಂಭಿಕರು ನೀಡಿದ ಉತ್ತಮ ಆರಂಭದ ಲಾಭ ಪಡೆದ ಇವರು, ನಾಲ್ಕನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ವಿದರ್ಭ ವಿರುದ್ಧದ ಈ ಪಂದ್ಯದಲ್ಲಿ ಸಮೀರ್, 10 ಬೌಂಡರಿಗಳು ಹಾಗೂ ಬರೋಬ್ಬರಿ 18 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಉತ್ತರ ಪ್ರದೇಶ ವಿರುದ್ಧದ ಈ ಪಂದ್ಯದಲ್ಲಿ ವಿದರ್ಭ ತಂಡ ಮೊದಲು ಬ್ಯಾಟ್‌ ಮಾಡಿ 407 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಸಮೀರ್ ರಿಝ್ವಿ ಬಿರುಸಿನ ಬ್ಯಾಟಿಂಗ್‌ ಬಲದಿಂದ ಯುಪಿ, ಕೇವಲ 41.2 ಓವರ್‌ಗಳಲ್ಲಿ ಗುರಿ ತಲುಪಿತು. ವಿದರ್ಭ ತಂಡಕ್ಕಿಂದ ಮೊದಲು, ಸಮೀರ್, ತ್ರಿಪುರಾ ವಿರುದ್ಧ 201 ರನ್‌ಗಳ ದೊಡ್ಡ ಇನಿಂಗ್ಸ್‌ ಆಡಿದ್ದರು.‌

ಈ ಎರಡು ದ್ವಿಶತಕಗಳ ಹೊರತಾಗಿಯೂ ಸಮೀರ್ ರಿಝ್ವಿ ಹಿಮಾಚಲ ಪ್ರದೇಶ ವಿರುದ್ಧ 157 ರನ್ ಮತ್ತು ಪಾಂಡಿಚೇರಿ ವಿರುದ್ಧ 137 ರನ್‌ಗಳ ಇನಿಂಗ್ಸ್‌ಗಳನ್ನು ಆಡಿದ್ದರು. ಇದರೊಂದಿಗೆ ಉತ್ತರ ಪ್ರದೇಶದ ಸ್ಪೋಟಕ ಬ್ಯಾಟ್ಸ್‌ಮನ್‌, ಈ ಟೂರ್ನಿಯಲ್ಲಿ 242.67ರ ಸರಾಸರಿಯಲ್ಲಿ ಒಟ್ಟು 728 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಇವರ ಸ್ಟ್ರೈಕ್ ರೇಟ್ 172.51ರಷ್ಟಿದೆ ಎಂಬುದು ಗಮನಾರ್ಹ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಫ್ಯಾನ್ಸ್‌ಗೆ ಸಂತಸ

ಸಮೀರ್ ರಿಝ್ವಿ ಅವರ ಈ ಅಪಾಯಕಾರಿ ಬ್ಯಾಟಿಂಗ್ ನೋಡಿ ಡೆಲ್ಲಿ ಕ್ಯಾಪಿಟಲ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ ಜೊತೆಗೆ ಅಭಿಮಾನಿಗಳಿಗೆ ತುಂಬಾ ಸಂತೋಷವಾಗುತ್ತದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮೆಗಾ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಸಮೀರ್ ರಿಝ್ವಿ ಅವರನ್ನು ಕೇವಲ 95 ಲಕ್ಷ ರೂ. ಗಳಿಗೆ ಖರೀದಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೂ ಮುನ್ನ ಸಮೀರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು.

ಈ ಸುದ್ದಿಯನ್ನು ಓದಿ: Vijay Hazare Trophy: ಉತ್ತರ ಪ್ರದೇಶ ತಂಡಕ್ಕೆ ಕೆಕೆಆರ್‌ ಸ್ಟಾರ್ ರಿಂಕು ಸಿಂಗ್‌ ನಾಯಕ!