Monday, 25th November 2024

ನಾರ್ವೆ ಚೆಸ್‌: ವಿಶ್ವನಾಥನ್‌ ಆನಂದ್‌’ಗೆ ಮೊದಲ ಸೋಲು

ಸ್ಟಾವೆಂಜರ್‌: ಚೆಸ್‌ ಟೂರ್ನಿಯಲ್ಲಿ ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು, ಅರ್ಮೇನಿಯದ ವೆಸ್ಲಿ ಸೊ ಎದುರು ಪರಾಭವಗೊಂಡರು.

ಸೋತರೂ ಆನಂದ್‌ ಅಗ್ರಸ್ಥಾನಕ್ಕೆ ಧಕ್ಕೆ ಉಂಟಾಗಿಲ್ಲ. 8.5 ಅಂಕಗಳೊಂದಿಗೆ ಅವರು ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆನಂದ್‌ ಮತ್ತು ಸೊ ನಡುವಿನ ಕ್ಲಾಸಿಕಲ್‌ ಪಂದ್ಯ 28 ನಡೆಗಳ ಬಳಿಕ ಡ್ರಾದಲ್ಲಿ ಕೊನೆ ಗೊಂಡಿತು. ವಿಜೇತರನ್ನು ನಿರ್ಣಯಿಸಲು ನಡೆದ ಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ನಲ್ಲಿ ಭಾರತದ ಸ್ಪರ್ಧಿ 46 ನಡೆಗಳಲ್ಲಿ ಜಯ ಸಾಧಿಸಿದರು.

ಆನಂದ್‌ ಮೊದಲ ಮೂರು ಸುತ್ತುಗಳಲ್ಲಿ ಕ್ರಮವಾಗಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್, ಬಲ್ಗೇರಿಯದ ವ್ಯಾಸೆಲಿನ್ ಟೊಪಾಲೋವ್ ಮತ್ತು ಚೀನಾದ ಹವೊ ವಾಂಗ್‌ ಅವರನ್ನು ಮಣಿಸಿದ್ದರು.

ಕಾರ್ಲ್‌ಸನ್‌ ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಅವರನ್ನು ಸೋಲಿಸಿ, ಮೂರು ಪಾಯಿಂಟ್ಸ್ ಕಲೆ ಹಾಕಿ ಜಂಟಿ ಅಗ್ರಸ್ಥಾನಕ್ಕೇರಿದರು. ಅಜರ್‌ಬೈಜಾನ್‌ನ ಶಕ್ರಿಯಾರ್ ಮಮೆದ್ಯರೋವ್, ಹವೊ ವಾಂಗ್‌ ವಿರುದ್ಧ; ಟೊಪಲೊವ್‌, ಲಗ್ರಾವ್‌ ವಿರುದ್ಧ ಗೆಲುವು ಸಾಧಿಸಿದರು.