ನವದೆಹಲಿ: ಸೋಮವಾರ ನಡೆದಿದ್ದ 2ನೇ ದಿನ ಐಪಿಎಲ್ ಮೆಗಾ ಹರಾಜಿನಲ್ಲಿ(IPL auction) ರಾಜಸ್ಥಾನ್ ರಾಯಲ್ಸ್(Rajasthan Royals) ತಂಡಕ್ಕೆ 1.10 ಕೋಟಿ ರೂ. ಮೊತ್ತಕ್ಕೆ ಬಿಕರಿಯಾದ ಬಿಹಾರದ 13 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi), ಐಪಿಎಲ್ ಹರಾಜು ಇತಿಹಾಸದಲ್ಲೇ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇದೀಗ ಅವರು ವಯಸ್ಸಿನ ಕುರಿತ ವಿವಾದಕ್ಕೆ ಸಿಲುಕಿದ್ದಾರೆ. ವೈಭವ್‌ಗೆ 13 ವರ್ಷವಲ್ಲ ಬದಲಿಗೆ 15 ವರ್ಷ ಎಂದು ಕೆಲವರು ಆರೋಪಿಸಿದ್ದಾರೆ.
ಮಗನ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಂದೆ ಸಂಜೀವ್ ಸೂರ್ಯವಂಶಿ ಸ್ಪಷ್ಟನೆ ನೀಡಿದ್ದು ಪುತ್ರನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಕುರಿತು ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಸಂಜೀವ್ ಸೂರ್ಯವಂಶಿ, ʼಮಗ ಎಂಟೂವರೆ ವರ್ಷದವನಾಗಿದ್ದಾಗ ಬಿಸಿಸಿಐನ ಮೂಳೆ ಪರೀಕ್ಷೆಗೆ ಹಾಜರಾಗಿದ್ದ. ಆತ ಈಗಾಗಲೇ ಅಂಡರ್ 19 ಭಾರತ ತಂಡದಲ್ಲಿ ಆಡಿದ್ದಾನೆ. ನಾವು ಯಾರಿಗೂ ಹೆದರುವುದಿಲ್ಲ. ಆತ ಮತ್ತೆ ವಯಸ್ಸಿನ ಪರೀಕ್ಷೆಗೊಳಗಾಗಲು ಸಿದ್ಧʼ ಮಗನ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸುಳ್ಳು. ಆತನ ವಯಸ್ಸಿನ ಬಗ್ಗೆ ಬಿಸಿಸಿಐಗೆ ಸ್ಪಷ್ಟ ಮಾಹಿತಿ ಇದೆʼ ಎಂದು ಹೇಳಿದರು.
ಇದನ್ನೂ ಓದಿ IPL 2025 Auction: ಕೇವಲ 13 ವರ್ಷದ ಹುಡುಗ ಕೋಟ್ಯಧಿಪತಿ! ಆರ್‌ಆರ್ ಸೇರಿದ ವೈಭವ್ ಸೂರ್ಯವಂಶಿ ಯಾರು?
ಇದೇ ವೇಳೆ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ತಾವು ಪಟ್ಟ ಶ್ರಮವನ್ನು ಕೂಡ ಸಂಜೀವ್ ಸೂರ್ಯವಂಶಿ ನೆನಪಿಸಿಕೊಂಡರು. 10 ವರ್ಷವಿದ್ದಾಗ ಪುತ್ರನ ಕ್ರಿಕೆಟ್ ಬಯಕೆಯನ್ನು ಪೂರೈಸಲು ನಾನು ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದೆ. ರಾಹುಲ್ ದ್ರಾವಿಡ್ ಕೋಚ್ ಆಗಿರುವ ರಾಜಸ್ಥಾನ್ ತಂಡ ಸೇರಿರುವ ಬಗ್ಗೆ ತುಂಬ ಖುಷಿ ಇದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಹೆಚ್ಚಿನ ಕ್ರಿಕೆಟ್ ಕೌಶಲ್ಯ ಕಲಿಯುವ ಅವಕಾಶ ಸಿಕ್ಕಿದೆ ಎಂದರು. ಸದ್ಯ ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಶ್ಯ ಕಪ್ ನಲ್ಲಿ ವೈಭವ್ ಸೂರ್ಯವಂಶಿ ಪಾಲ್ಗೊಂಡಿದ್ದಾರೆ.
ಸೂರ್ಯವಂಶಿ, ತನ್ನ 12ನೇ ವಯಸ್ಸಿನಲ್ಲಿ ಬಿಹಾರ ತಂಡದ ಪರ ವಿನೋ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಇಲ್ಲಿ ಆಡಿದ್ದ ಕೇವಲ ಐದು ಪಂದ್ಯಗಳಿಂದ ಅವರು 400 ರನ್‌ಗಳನ್ನು ಸಿಡಿಸಿದ್ದರು. 12ನೇ ವಯಸ್ಸಿನಲ್ಲಿಯೇ ವೈಭವ್ ಬಿಹಾರ ಹಿರಿಯರ ತಂಡದ ಪರ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಅಂಡರ್19 ಭಾರತ ತಂಡದ ಪರ ಆಡಿದ್ದ ವೈಭವ್, ಚೆನ್ನೈನಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ದ ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.
ಪ್ರಸಕ್ತ ವರ್ಷದ ಆರಂಭದಲ್ಲಿ ವೈಭವ್ ಸೂರ್ಯವಂಶಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅವರು ಕಳೆದ ಜನವರಿ ತಿಂಗಳಲ್ಲಿ ಪಾಟ್ನಾದಲ್ಲಿ ಮುಂಬೈ ವಿರುದ್ದ ಟೂರ್ನಿಯ ಎಲೈಟ್ ಗ್ರೂಪ್ ಬಿನಲ್ಲಿ ತನ್ನ ಮೊದಲನೇ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಆ ಮೂಲಕ 1986ರ ಬಳಿಕ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ವೇಳೆ ಅವರಿಗೆ 12 ವರ್ಷ 284 ದಿನಗಳಾಗಿದ್ದವು.