Saturday, 11th January 2025

Vijay Hazare Trophy: ಬರೋಡಾವನ್ನು ಮಣಿಸಿ ಸೆಮಿಫೈನಲ್‌ಗೇರಿದ ಕರ್ನಾಟಕ!

Vijay Hazare Trophy: Devdutt Padikkal's Hundred help Karnatak to beat Baroda by 5 Runs and Qualify for Semifinals

ವಡೋದರ: ದೇವದತ್‌ ಪಡಿಕ್ಕಲ್‌ (102 ರನ್‌) ಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡ, ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬರೋಡ ಎದುರು 5 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2024-25ರ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ(Vijay Hazare Trophy) ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ.

ಇಲ್ಲಿನ ಮೋಟಿ ಬಾಗ್‌ ಮೈದಾನದಲ್ಲಿ ನಡೆದಿದ್ದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 282 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಬರೋಡಾ ತಂಡಕ್ಕೆ ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನಲ್ಲಿ ಅಭಿಲಾಷ್‌ ಶೆಟ್ಟಿ ಎರಡು ರನ್‌ ಔಟ್‌ ಸೇರಿ ಕೇವಲ 6 ರನ್‌ಗಳಿಗೆ ಬರೋಡಾ ತಂಡವನ್ನು ಕಟ್ಟಿಹಾಕಿ ಕರ್ನಾಟಕವನ್ನು ಗೆಲುವಿನ ದಡ ಸೇರಿಸಿದರು.

ಬರೋಡಾ ತಂಡದ ಪರ ಶಾಶ್ವತ್‌ ರಾವತ್‌ ಹಾಗೂ ಅತಿತ್‌ ಸೆಠ್‌ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಶಾಶ್ವತ್‌ ರಾವತ್‌ 126 ಎಸೆತಗಳಲ್ಲಿ 104 ರನ್‌ ಗಳಿಸಿ ಕೊನೆಯ ಹಂತದಲ್ಲಿ ಪ್ರಸಿಧ್‌ ಕೃಷ್ಣ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರೆ, ಇದಕ್ಕೂ ಮುನ್ನ ಅತಿತ್‌ ಸೆಠ್‌ ಅವರು 59 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿ ಶ್ರೇಯಸ್‌ ಗೋಪಾಲ್‌ಗೆ ಔಟ್‌ ಆಗಿದ್ದರು. ಕೃಣಾಲ್‌ ಪಾಂಡ್ಯ 30 ರನ್‌ ಗಳಿಸಿದರೆ, ಕೊನೆಯಲ್ಲಿ ಭಾರ್ಗವ್‌ ಭಟ್‌ 22 ರನ್‌ ಗಳಿಸಿ ಬರೋಡಾಗೆ ಗೆಲುವಿಗೆ ಆಸರೆ ನೀಡಿದ್ದರು. ಆದರೆ, ಕೊನೆಯ ಓವರ್‌ನಲ್ಲಿ ಇವರು ರನ್‌ ಔಟ್‌ ಆದರು.

ಅಂತಿಮವಾಗಿ ಬರೋಡಾ ತಂಡ 49.5 ಓವರ್‌ಗಳಿಗೆ 276 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕರ್ನಾಟಕ ಪರ ವಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ಪ್ರಸಿಧ್‌ ಕೃಷ್ಣ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದರು.

281 ರನ್‌ ಕಲೆ ಹಾಕಿದ್ದ ಕರ್ನಾಟಕ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕರ್ನಾಟಕ ತಂಡ, ದೇವದತ್‌ ಪಡಿಕ್ಕಲ್‌ ಶತಕ ಹಾಗೂ ಕೆವಿ ಅನೀಶ್‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 281 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಬರೋಡಾ ತಂಡಕ್ಕೆ 282 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

ಪಡಿಕ್ಕಲ್‌-ಅನೀಷ್‌ ಜುಗಲ್‌ಬಂದಿ

ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಕಳೆದ ಪಂದ್ಯಗಳಲ್ಲಿ ಸತತ ಶತಕಗಳನ್ನು ಸಿಡಿಸಿದ್ದ ಮಯಾಂಕ್‌ ಅಗರ್ವಾಲ್‌ ಈ ಪಂದ್ಯದಲ್ಲಿ 15 ಎಸೆತಗಳಲ್ಲಿ ಕೇವಲ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ಮತ್ತು ಅನೀಷ್‌ ಕೆವಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿ 133 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಕರ್ನಾಟಕ ತಂಡದ ಮೊತ್ತವನ್ನು 160ರ ಗಡಿಯನ್ನು ದಾಟಿಸಲು ನೆರವು ನೀಡಿದರು.

ದೇವದತ್‌ ಪಡಿಕ್ಕಲ್‌ ಭರ್ಜರಿ ಶತಕ

ಕರ್ನಾಟಕ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ದೇವದತ್‌ ಪಡಿಕ್ಕಲ್‌ ಭರ್ಜರಿ ಶತಕವನ್ನು ಸಿಡಿಸಿದರು. ಅವರು ಆಡಿದ 99 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 15 ಮನಮೋಹಕ ಬೌಂಡರಿಗಳೊಂದಿಗೆ 102 ರನ್‌ಗಳನ್ನು ಬಾರಿಸಿದರು. ಆದರೆ, ಅವರನ್ನು ರಾಜ್‌ ಲಿಂಬಾಣಿ ಔಟ್‌ ಮಾಡಿದರು. ಇದಕ್ಕೂ ಮುನ್ನ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಅನೀಷ್‌ ಕೆವಿ, 64 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 52 ರನ್‌ಗಳನ್ನು ಕಲೆ ಹಾಕಿದ್ದರು. ಸ್ಮರಣ್‌ ರವಿಚಂದ್ರನ್‌ ಮತ್ತು ಕೆ ಶ್ರೀಜಿತ್‌ ತಲಾ 28 ರನ್‌ಗಳನ್ನು ನಿರ್ಣಾಯಕ ರನ್‌ಗಳನ್ನು ಕಲೆ ಹಾಕಿದರು.

ಬರೋಡಾ ಪರ ರಾಜ್‌ ಲಿಂಬಾಣಿ ಮತ್ತು ಅತಿತ್‌ ಸೇಠ್‌ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಸ್ಕೋರ್‌ ವಿವರ

ಕರ್ನಾಟಕ: 50 ಓವರ್‌ಗಳಿಗೆ 281-8 (ದೇವದತ್‌ ಪಡಿಕ್ಕಲ್‌ 102, ಅನೀಷ್‌ ಕೆವಿ 54; ಅತಿತ್‌ ಸೇಠ್‌ 41 ಕ್ಕೆ 3, ರಾಜ್‌ ಲಿಂಬಾಣಿ 47ಕ್ಕೆ 3)

ಬರೋಡಾ: 49.5 ಓವರ್‌ಗಳಿಗೆ 276-10 (ಶಾಶ್ವತ್‌ ರಾವತ್‌ 104, ಅತಿತ್‌ ಸೇತ್‌ 52 ರನ್‌; ವಿ ಕೌಶಿಕ್‌ 39ಕ್ಕೆ 2, ಪ್ರಸಿಧ್‌ ಕೃಷ್ಣ 60 ಕ್ಕೆ 2, ಶ್ರೇಯಸ್‌ ಗೋಪಾಲ್‌ 38ಕ್ಕೆ 2, ಅಭಿಲಾಷ್‌ ಶೆಟ್ಟಿ 70ಕ್ಕೆ 2)

ಈ ಸುದ್ದಿಯನ್ನು ಓದಿ: Devdutt Padikkal: ಶತಕದ ಮೂಲಕ ಬಲವಾಗಿ ಕಮ್‌ಬ್ಯಾಕ್ ಮಾಡಿದ ಕನ್ನಡಿಗ!

Leave a Reply

Your email address will not be published. Required fields are marked *