Tuesday, 7th January 2025

ವಿಜಯ್‌ ಹಜಾರೆ: ನಾಕೌಟ್ ಪಂದ್ಯದ ವೇಳಾಪಟ್ಟಿ ಹೀಗಿದೆ

ಅಹಮದಾಬಾದ್‌: ಪ್ರಸಕ್ತ ಸಾಲಿನ ವಿಜಯ್‌ ಹಜಾರೆ(Vijay Hazare Trophy) ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ ರಾಜ್ಯ ತಂಡ ನಾಗಲ್ಯಾಂಡ್‌ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸುವ ಮೂಲಕ ಈ ಸಾಧನೆಗೈದಿತು.

‘ಸಿ’ ಗುಂಪಿನಲ್ಲಿ ಆಡಿರುವ ಮಯಾಂಕ್‌ ಅಗರ್ವಾಲ್‌ ಸಾರಥ್ಯದ ಕರ್ನಾಟಕ ಆಡಿದ 7 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 24 ಅಂಕ ಸಂಪಾದಿಸಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. 2ನೇ ಸ್ಥಾನಿಯಾದ ಪಂಜಾಬ್‌(24 ಅಂಕ) ಪ್ರಿ ಕ್ವಾರ್ಟರ್‌ ತಲುಪಿತು.

ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನಾಗಲ್ಯಾಂಡ್‌ 48.3 ಓವರ್‌ಗಳಲ್ಲಿ 206 ರನ್‌ಗೆ ಆಲೌಟಾಯಿತು. ಸ್ಪಿನ್ನರ್ ಶ್ರೇಯಸ್‌ ಗೋಪಾಲ್‌ 4, ಅಭಿಲಾಶ್‌ ಶೆಟ್ಟಿ 2 ವಿಕೆಟ್‌ ಕಿತ್ತು ಮಿಂಚಿದರು. ಸ್ಪರ್ಧಾತ್ಮಕ ಗುರಿಯನ್ನು ಕರ್ನಾಟಕ ತಂಡ 37.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ 207 ರನ್‌ ಬಾರಿಸಿ ಗೆಲುವಿನ ಸಂಭ್ರಮ ಕಂಡಿತು. ಉತ್ತಮ ಲಯದಲ್ಲಿರುವ ನಾಯಕ ಮಯಾಂಕ್‌ ಟೂರ್ನಿಯಲ್ಲಿ 4ನೇ ಶತಕ ಸಿಡಿಸಿದರು. 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 116 ರನ್‌ ಬಾರಿಸಿದರು. ಅನೀಶ್‌ ಕೆ.ವಿ. ಔಟಾಗದೆ 82 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು. ನಾಗಲ್ಯಾಂಡ್‌ ಪರ ಚೇತನ್‌ ಬಿಸ್ತ್‌ 77, ನಾಯಕ ರೊಂಗ್ಸನ್ ಜೊನಾಥನ್‌ 51 ರನ್‌ ಬಾರಿಸಿದರು.

ನಾಕೌಟ್ ಪಂದ್ಯಗಳ ವೇಳಾಪಟ್ಟಿ

ಪ್ರಿ ಕ್ವಾರ್ಟರ್‌ಫೈನಲ್ಸ್ – ಜನವರಿ 9

ಹರಿಯಾಣ-ಬಂಗಾಳ
ರಾಜಸ್ಥಾನ-ತಮಿಳುನಾಡು

ಕ್ವಾರ್ಟರ್‌ಫೈನಲ್ಸ್-ಜನವರಿ11

ಕರ್ನಾಟಕ-ಬರೋಡ
ಮಹಾರಾಷ್ಟ್ರ -ಪಂಜಾಬ್

ಜನವರಿ12: ವಿದರ್ಭ- ರಾಜಸ್ಥಾನ/ತಮಿಳುನಾಡು

ಗುಜರಾತ್- ಹರಿಯಾಣ/ಬಂಗಾಳ

ನೇರಪ್ರಸಾರ: ಜಿಯೋ ಸಿನಿಮಾ

Leave a Reply

Your email address will not be published. Required fields are marked *