ಅಹಮದಾಬಾದ್: ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಬೃಹತ್ ಮೊತ್ತ ಪೇರಿಸಿಯೂ 3 ವಿಕೆಟ್ ಸೋಲು ಕಂಡಿದ್ದ ಕರ್ನಾಟಕ ತಂಡ ಇದೀಗ ಮತ್ತೆ ಗೆಲುವಿನ ಹಳಿ ಏರಿದೆ. ಶುಕ್ರವಾರ ನಡೆದ ವಿಜಯ್ ಹಜಾರೆ(Vijay Hazare Trophy) ಕೂಟದ ಸೌರಾಷ್ಟ್ರ ಎದುರಿನ ಪಂದ್ಯದಲ್ಲಿ 60 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ರಾಜ್ಯದ ಪರ ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದ ವಾಸುಕಿ ಕೌಶಿಕ್(51 ಕ್ಕೆ 5) ಮತ್ತು ಶ್ರೇಯಸ್ ಗೋಪಾಲ್(63 ಕ್ಕೆ 4) ಗೆಲುವಿನ ಹೀರೋ ಎನಿಸಿಕೊಂಡರು.
ಇಲ್ಲಿನ ಎಡಿಎಸ್‌ಎ ರೈಲ್ವೇ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಸಂಘಟಿತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 349 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸೌರಾಷ್ಟ್ರ ತಂಡ ಹಾರ್ವಿಕ್ ದೇಸಾಯಿ ಶತಕದ ಹೊರತಾಗಿಯೂ 47.5 ಓವರ್ ಗಳಲ್ಲಿ 289 ರನ್‌ಗೆ ಆಲೌಟಾಯಿತು.
ಚೇಸಿಂಗ್ ವೇಳೆ ಆರಂಭಿಕ ಆಟಗಾರರಾದ ಹಾರ್ವಿಕ್ ದೇಸಾಯಿ ಮತ್ತು ತರಂಗ್ ಗೊಹೆಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟ ನಡೆಸಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ವಿ.ಕೌಶಿಕ್ ಬೇರ್ಪಡಿಸಿದರು. 33 ರನ್ ಗಳಿಸಿದ್ದ ವೇಳೆ ತರಂಗ್ ಗೊಹೆಲ್ ವಿಕೆಟ್ ಬೇಟೆಯಾಡಿದರು. ಈ ವಿಕೆಟ್ ಬಿದ್ದರೂ ಆ ಬಳಿಕ ಬಂದ ಬ್ಯಾಟರ್‌ಗಳಾದ ಜೈ ಗೋಹಿಲ್(40) ಮತ್ತು ಅರ್ಪಿತ್ ವಾಸವಾಡ(40) ರನ್ ಬಾರಿಸುವ ಮೂಲಕ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡರು. ಆದರೆ ಉಭಯ ಆಟಗಾರರ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡ ನಾಟಕೀಯ ಕುಸಿತಕ್ಕೊಳಗಾಯಿತು.
ಹಾರ್ವಿಕ್ ಶತಕ ವ್ಯರ್ಥ
ಉತ್ತಮವಾಗಿ ಆಡುತ್ತಿದ್ದ ಹಾರ್ವಿಕ್ ದೇಸಾಯಿಗೆ ಅರ್ಪಿತ್ ಮತ್ತು ಗೋಹಿಲ್ ವಿಕೆಟ್ ಪತನದ ಬಳಿಕ ಸರಿಯಾದ ಜತೆಯಾಟ ಸಿಗಲಿಲ್ಲ. ಶತಕ ಪೂರ್ತಿಗೊಳಿಸಿದ ಅವರು ಆ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಲು ಮುಂದಾಗಿ ವಿಕೆಟ್ ಕಳೆದುಕೊಂಡರು. 102 ಎಸೆತ ಎದುರಿಸಿದ ಹಾರ್ವಿಕ್ 4 ಸಿಕ್ಸರ್ ಮತ್ತು 10 ಬೌಂಡರಿ ನೆರವಿನಿಂದ 114 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಶತಕ ವ್ಯರ್ಥವಾಯಿತು. ಕರ್ನಾಟಕ ಪರ ವಿ. ಕೌಶಿಕ್ 10 ಓವರ್ ಬೌಲಿಂಗ್ ದಾಳಿ ನಡೆಸಿ ಒಂದು ಮೇಡನ್ ಸಹಿತ 51 ರನ್ ವೆಚ್ಚದಲ್ಲಿ 5 ವಿಕೆಟ್ ಉಡಾಯಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್(66) ಮತ್ತು ಅನೀಶ್ (93) ಅರ್ಧಶತಕ ಬಾರಿಸಿ ಮಿಂಚಿದರು. ಕೆಲ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅಭಿನವ್ ಮನೋಹರ್ ಅಜೇಯ 44 ರನ್ ಬಾರಿಸಿದರು. ಸ್ಮರಣ್ ರವಿಚಂದ್ರನ್(40) ರನ್ ಗಳಿಸಿದರು.