ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಕೂಟದಲ್ಲಿ ಕರ್ನಾಟಕ ತಂಡ ಸತತ ನಾಲ್ಕನೇ ಜಯದೊಂದಿಗೆ ಅಜೇಯ ಓಟ ಬೆಳೆಸಿದೆ. ಶನಿವಾರ ನಡೆದ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ 10 ವಿಕೆಟ್ ಗಳ ಗೆಲುವು ಸಾಧಿಸಿದೆ. ನಾಯಕ ಮಾಯಾಂಕ್ ಅಗರ್ವಾಲ್ ಬಾರಿಸಿದ ಅಜೇಯ ಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಎದುರಾಳಿ ಅರುಣಾಚಲ ಪ್ರದೇಶವನ್ನು 166ರನ್‌ಗೆ ಕಟ್ಟಿಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟುವ ವೇಳೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಅಭಿನವ್ ಮನೋಹರ್ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿ ವಿಕೆಟ್ ನಷ್ಟವಿಲ್ಲದೆ 14.2 ಓವರ್‌ಗಳಲ್ಲಿ 171 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಮೊದಲ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದ ಅಭಿನವ್ ಮನೋಹರ್ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ನಿಕಿನ್ ಜೋಸ್ ಸ್ಥಾನದಲ್ಲಿ ಆಡಲಿಳಿದ ಮನೋಹರ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅರ್ಧ ಶತಕ ಬಾರಿಸಿ ಮಿಂಚಿದರು. ಜತೆಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು, 4 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ ಅಜೇಯ 66 ರನ್ ಬಾರಿಸಿದರು.
ಇದನ್ನೂ ಓದಿ Nitish Reddy: ಮಗನ ಶತಕ ಕಂಡು ಆನಂದಭಾಷ್ಪ ಸುರಿಸಿದ ತಂದೆ; ಭಾವುಕ ವಿಡಿಯೊ ಇಲ್ಲಿದೆ
ಅಭಿನವ್ ಮನೋಹರ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ನಾಯಕ ಮಯಾಂಕ್ ಅಗರ್ವಾಲ್ ಕೂಡ ಹೊಡಿಬಡಿ ಆಟದ ಮೂಲಕ ಕೇವಲ 45 ಎಸೆತಗಳಿಂದ ಭರ್ತಿ 100 ರನ್ ಚಚ್ಚಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ತಲಾ 7 ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ಬೌಂಡರಿ ಮತ್ತು ಸಿಕ್ಸರ್ ಮೂಲಕವೇ 70 ರನ್ ಕಲೆಹಾಕಿದರು. ಬೌಲಿಂಗ್‌ನಲ್ಲಿ ವಿ. ಕೌಶಿಕ್ ಮತ್ತು 18 ವರ್ಷದ ಹಾರ್ದಿಕ್ ರಾಜ್ ತಲಾ 4 ವಿಕೆಟ್ ಕಡೆವಿದರು.
ಮೊದಲು ಬ್ಯಾಟಿಂಗ್ ನಡೆಸಿದ ಅರುಣಾಚಲ ಪ್ರದೇಶದ ಪರ ಕೇವಲ ಮೂರು ಮಂದಿ ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಮೂರು ಮಂದಿ ಶೂನ್ಯ ಸಂಕಟಕ್ಕೆ ಸಿಲುಕಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿ ಅಭಿನವ್ ಸಿಂಗ್ 71 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರಂಭಕಾರ ರಾಜೇಂದರ್ ಸಿಂಗ್(30) ಮತ್ತು ಹಾರ್ದಿಕ್ ವರ್ಮಾ(38) ರನ್ ಗಳಿಸಿದರು.