ನವದೆಹಲಿ: ಇತ್ತೀಚೆಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದ ವೈಭವ್ ಸೂರ್ಯವಂಶಿ ಇದೀಗ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೆಗಾ ಹರಾಜಿನಲ್ಲಿ ವೈಭವ್ ಅವರನ್ನು 1.1 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಬಿಹಾರ ತಂಡದ ವೈಭವ್, ಶನಿವಾರ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಮಧ್ಯ ಪ್ರದೇಶ ವಿರುದ್ಧ ಆಡುವ ಮೂಲಕ ಲಿಸ್ಟ್ ಎ ಪಂದ್ಯವನ್ನು ಆಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಶನಿವಾರ ವೈಭವ್ ಸೂರ್ಯವಂಶಿ 13 ವರ್ಷ ಮತ್ತು 269 ದಿನಗಳಲ್ಲಿ ಬಿಹಾರ ತಂಡದ ಪರ ಲಿಸ್ಟ್ “ಎ” ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಅವರು, 1999/2000 ಸಾಲಿನಲ್ಲಿ ಅಲಿ ಅಕ್ಬರ್ ವಿದರ್ಭಕ್ಕಾಗಿ ಆಡಿದ ದಾಖಲೆಯನ್ನು ಮುರಿದ್ದಾರೆ. 14 ವರ್ಷ ಮತ್ತು 51 ದಿನಗಳಲ್ಲಿ ಅಂದರೆ 15ನೇ ವಯಸ್ಸಿನಲ್ಲಿ ಅಲಿ ಅಕ್ಬರ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ಮೊದಲ ಪಂದ್ಯವನ್ನು ಆಡಿದ್ದರು. ವೈಭವ್ ಈಗಾಗಲೇ ಕಿರಿಯ ವಯಸ್ಸಿನಲ್ಲಿ ರಣಜಿ ಟ್ರೋಫಿಯನ್ನು ಆಡಿದ ದಾಖಲೆಯನ್ನು ಕೂಡ ಹೊಂದಿದ್ದಾರೆ.
ಆದರೆ, ಇತ್ತೀಚೆಗಷ್ಟೇ ಅಂಡರ್-19 ಪಂದ್ಯಗಳಲ್ಲಿ ಸಂಚಲನ ಮೂಡಿಸಿದ್ದ ವೈಭವ್, ಲಿಸ್ಟ್ ಎ ಚೊಚ್ಚಲ ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಎರಡು ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಔಟಾದರು. ಆರ್ಯನ್ ಆನಂದ್ ಪಾಂಡೆ ಅವರ ಮೊದಲ ಎಸೆತದಲ್ಲಿ ವೈಭವ್ ಬೌಂಡರಿ ಬಾರಿಸಿದರು, ಆದರೆ ಅವರು ಮುಂದಿನ ಎಸೆತದಲ್ಲಿ ಔಟಾದರು. ಆದರೆ, ಸೂರ್ಯವಂಶಿ ಅವರ ಇತ್ತೀಚಿನ ಪ್ರದರ್ಶನವನ್ನು ನೋಡಿದರೆ ಮುಂಬರುವ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಬಹುದು.
ಇತ್ತೀಚೆಗೆ, ಯುವ ಬ್ಯಾಟ್ಸ್ಮನ್ ಅಂಡರ್-19 ಏಷ್ಯಾ ಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಒಂದೇ ಓವರ್ನಲ್ಲಿ 31 ರನ್ಗಳನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ಮನ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ ಸಿಕ್ಸರ್ಗಳೊಂದಿಗೆ 67 ರನ್ ಗಳಿಸಿದ್ದರು. ಆ ಮೂಲಕ ಭಾರತೀಯ ಕ್ರಿಕೆಟ್ನ ಮಿಂಚಿನ ಸಂಚಲನವನ್ನು ಮೂಡಿಸಿದ್ದಾರೆ.
ಮೆಗಾ ಹರಾಜಿನಲ್ಲಿ ದಾಖಲೆ ಬರೆದಿದ್ದ ವೈಭವ್ ಸೂರ್ಯವಂಶಿ
ಇತ್ತೀಚೆಗೆ ಅಂತ್ಯವಾಗಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 1.1 ಕೋಟಿ ರೂ. ಗಳಿಸಿಗೆ ಖರೀದಿಸಿತ್ತು. ಆ ಮೂಲಕ ಹರಾಜಿನಲ್ಲಿ ಐಪಿಎಲ್ ಸೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದರು. ಅವರು ಮುಂದಿನ ವರ್ಷ ಐಪಿಎಲ್ಗೆ ಪದಾರ್ಪಣೆ ಮಾಡಬಹುದು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಿಹಾರ ತಂಡ 46.4 ಓವರ್ಗಳಲ್ಲಿ 196 ರನ್ಗಳಿಗೆ ಆಲ್ಔಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಮಧ್ಯ ಪ್ರದೇಶ ತಂಡ 25.1 ಓವರ್ಗಳಿಗೆ ಗುರಿಯನ್ನು ತಲುಪಿ ಗೆಲುವು ಪಡೆದಿತ್ತು. ಬಿಹಾರ ತಂಡ ಸೋಮವಾರ ತ್ರಿಪುರ ವಿರುದ್ದ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.
ಈ ಸುದ್ದಿಯನ್ನು ಓದಿ: Vaibhav Suryavanshi: ವಯಸ್ಸಿನ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ