ಬೆಂಗಳೂರು: ಪರ್ತ್ ಟೆಸ್ಟ್ ಪಂದ್ಯದ ವೇಳೆ ವೀಕ್ಷಣೆ ನೀಡುತ್ತಿದ್ದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್(Sanjay Manjrekar) ಅವರು ಟೀಮ್ ಇಂಡಿಯಾದ ಮಾಜಿ ವೇಗಿ, ಕರ್ನಾಟಕದ ಆರ್. ವಿನಯ್ ಕುಮಾರ್(Vinay Kumar) ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇದೀಗ ವಿನಯ್ ಕುಮಾರ್ ಮಂಜ್ರೇಕರ್ಗೆ ತಕ್ಕ ತಿರುಗೇಟು ನೀಡಿದ್ದಾರೆ. ʼನಾನು ಭಾರತ ತಂಡವನ್ನು ಮೂರು ಮಾದರಿಯಲ್ಲಿ ಪ್ರತಿನಿಧಿಸಿದ ಆಟಗಾರ. ನನ್ನ ಸಾಧನೆ ಬಗ್ಗೆ ನನಗೆ ಮತ್ತು ತಂಡಕ್ಕೆ ತಿಳಿದಿದೆ. ಭಾರತ ತಂಡವನ್ನು ಪ್ರತಿನಿಧಿಸಿದ ಬಗ್ಗೆ ಬಹಳ ಹೆಮ್ಮೆ ಇದೆ. ಬಹಳ ಕಷ್ಟಪಟ್ಟು ಕ್ರಿಕೆಟಿಗನಾಗಿ ಬೆಳೆದಿದ್ದೇನೆ ಎಂದು ಹೇಳುವ ಮೂಲಕ ಮಂಜ್ರೇಕರ್ಗೆ ತಿರುಗೇಟು ಕೊಟ್ಟಿದ್ದಾರೆ.
ಮಂಜ್ರೇಕರ್ ಅವರು ಕಾಮೆಂಟ್ರಿ ವೇಳೆ ರಣಜಿ ಪಂದ್ಯಗಳಲ್ಲಿ ಪಿಚ್ ಮೇಲೆ ಹೆಚ್ಚು ಹುಲ್ಲು ಇರಲಿದ್ದು, ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೌಲ್ ಮಾಡುವ ವಿನಯ್ ಕುಮಾರ್ರಂಥ ಬೌಲರ್ಗಳೂ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಎಂದಿದ್ದರು. ಇದು ವಿನಯ್ ಕುಮಾರ್ ಸಿಟ್ಟಿಗೆ ಕಾರಣವಾಗಿತ್ತು.
ಇದನ್ನೂ ಓದಿ Champions Trophy: ಹೈಬ್ರಿಡ್ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ; ಪಾಕ್ಗೆ ಹಿನ್ನಡೆ
ದಾವಣಗೆರೆ ಎಕ್ಸ್ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ವಿನಯ್ ಕುಮಾರ್ ಭಾರತ ತಂಡದ ಪರ ಟೆಸ್ಟ್, ಒಡಿಐ ಮತ್ತು ಟಿ20-ಐ ಮೂರೂ ಮಾದರಿಯ ಕ್ರಿಕೆಟ್ ಆಡಿರುವ ವಿನಯ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ಗೆ ಹೆಚ್ಚು ಹೆಸರುವಾಸಿ. ಟೀಮ್ ಇಂಡಿಯಾ ಪರ ಏಕೈಕ ಟೆಸ್ಟ್, 31 ಏಕದಿನ ಕ್ರಿಕೆಟ್ ಮತ್ತು 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಕೀರ್ತಿ ಅವರದ್ದು. ಎಲ್ಲಾ ಮಾದರಿಗಳಿಂದ ಒಟ್ಟು 49 ಅಂತಾರಾಷ್ಟ್ರೀಯ ವಿಕೆಟ್ ಕಿತ್ತಿದ್ದಾರೆ.
2011ರಲ್ಲಿ ದಿಲ್ಲಿಯಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದ ವಿನಯ್ 30ಕ್ಕೆ 4 ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ನಾಯಕನಾಗಿ 2013-14 ಮತ್ತು 2014-15ರ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 139 ಪಂದ್ಯಗಳನ್ನಾಡಿ 504, ಲಿಸ್ಟ್ ಎ ಪಂದ್ಯದಲ್ಲಿ 225 ವಿಕೆಟ್ ಉರುಳಿಸಿದ್ದಾರೆ.