ನವದೆಹಲಿ: ಬಾಂಗ್ಲಾದೇಶ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಗೆಲುವಿನ ಬಾವುಟ ಹಾರಿಸಿದ್ದ ಭಾರತ ತಂಡ ಇಂದು(ಬುಧವಾರ) ದ್ವಿತೀಯ ಪಂದ್ಯದ(IND vs BAN 2nd T20I)ಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಈ ಪಂದ್ಯಕ್ಕೆ ದಿಲ್ಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವುದು ಸೂರ್ಯಕುಮಾರ್(Suryakumar Yadav) ಪಡೆಯ ಯೋಜನೆಯಾಗಿದೆ. ಅತ್ತ ಸರಣಿ ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯವನ್ನು ಬಾಂಗ್ಲಾಗೆಲ್ಲಲೇಬೇಕಿದೆ. ಹೀಗಾಗಿ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಮಾಡಬಹುದು.
ಈ ಪಂದ್ಯಕ್ಕೆ ಭಾರತೀಯ ಆಟಗಾರರು ನೆಟ್ಸ್‌ನಲ್ಲಿ ಕರಿಣ ಅಭ್ಯಾಸ ನಡೆಸಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಭ್ಯಾಸದ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಅವರು ತಮಾಷೆಯಾಗಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್(Morne Morkel) ಜತೆ ಹಿಂದಿಯಲ್ಲಿ ಪ್ರಶ್ನೆ ಕೇಳಿದ್ದಾರೆ. ʼಕ್ಯಾ ಹುವಾ, ಕುಚ್ ಬೋಲೋʼ( ಏನಾಗಿದೆ, ಏನಾದರೂ ಮಾತನಾಡಿ) ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲಾಗದೆ ಮಾರ್ಕೆಲ್ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ(Viral Video). ಬಿಸಿಸಿಐ(BCCI ) ಹಂಚಿಕೊಂಡ ಅಭ್ಯಾಸದ ವಿಡಿಯೊದಲ್ಲಿ ಸೂರ್ಯ ಅವರು ಮಾರ್ಕೆಲ್ ಜತೆ ಹಿಂದಿ ಮಾತನಾಡಿದ್ದು ಕಾಣಬಹುದಾಗಿದೆ.
ಪಿಚ್ ವರದಿ
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ನಡೆದ ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ದೊಡ್ಡ ಮೊತ್ತ ದಾಖಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಬೃಹತ್ ಮೊತ್ತದ ನಿರೀಕ್ಷೆ ಮಾಡಲಾಗಿದೆ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಪಂದ್ಯದ ವೇಳೆ ಮೋಡ ಕವಿದ ವಾತಾವರಣ ಕಂಡು ಬಂದರೂ ಕೂಡ ತಾಪಮಾನ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಭಯ ತಂಡಗಳು ಕೂಡ ಈ ಪಂದ್ಯಕ್ಕೆ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಕಳೆದ ಪಂದ್ಯದ ತಂಡವನ್ನೇ ಆಡಿಸಬಹುದು.
ಇದನ್ನೂ ಓದಿ IND vs BAN: ಸೂರ್ಯಕುಮಾರ್ ಸಿಕ್ಸರ್ ಏಟಿಗೆ ಜಾಸ್ ಬಟ್ಲರ್ ದಾಖಲೆ ಪತನ
ಸಂಭಾವ್ಯ ಆಡುವ ಬಳಗ
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.
ಬಾಂಗ್ಲಾದೇಶ: ಲಿಟ್ಟನ್ ದಾಸ್ (ವಿ.ಕೀ), ಪರ್ವೇಜ್ ಹೊಸೈನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದೋಯ್, ಮಹಮ್ಮದುಲ್ಲಾ, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.