ಮೆಲ್ಬರ್ನ್: ಇಂದು ಆರಂಭಗೊಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅನಗತ್ಯವಾಗಿ 19 ವರ್ಷದ ಸ್ಯಾಮ್ ಕೋನ್‌ಸ್ಟಾಸ್‌ಗೆ(Sam Konstas) ಭುಜದಿಂದ ಗುದ್ದಿ ದುರ್ವರ್ತನೆ ತೋರಿದ್ದರು. ಇದೀಗ ಕೊಹ್ಲಿಯ ಈ ವರ್ತನೆಗೆ ಐಸಿಸಿ(ICC) ದಂಡದ ಬಿಸಿ ಮುಟ್ಟಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣ ಪಂದ್ಯವಾನ್ನಾಡಿದ ಸ್ಯಾಮ್ ಕೋನ್‌ಸ್ಟಾಸ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಜಸ್‌ಪ್ರೀತ್ ಬುಮ್ರಾ ಅವರ ಎಸೆತಗಳಿಗೆ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್ ಬಾರಿಸಿದ್ದು ಮೊದಲ ದಿನ ಹೈಲೆಟ್ಸ್ ಆಗಿತ್ತು. ಅರ್ಧಶತಕ ಬಾರಿಸಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಸ್ಯಾಮ್ ಕೋನ್‌ಸ್ಟಾಸ್ ಅವರನ್ನು ವಿರಾಟ್ ಕೊಹ್ಲಿಅನಗತ್ಯವಾಗಿ ಕೆಣಕಿದರು.
ಇದನ್ನೂ ಓದಿ Sam Konstas: ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್, 3 ವರ್ಷಗಳ ಬಳಿಕ ಸಿಕ್ಸ್ ಹೊಡೆಸಿಕೊಂಡ ಬುಮ್ರಾ! ವಿಡಿಯೊ
ಓವರ್ ಮುಕ್ತಾಯದ ಬಳಿಕ ಕೋನ್‌ಸ್ಟಾಸ್ ಅವರು ನಾನ್ ಸ್ಟ್ರೈಕ್‌ನಿಂದ ಸ್ಟ್ರೈಕ್ ಬಳಿ ತೆರಳುತ್ತಿದ್ದರು. ಈ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದ ಕೊಹ್ಲಿ ನೇರವಾಗಿ ಪಿಚ್ ಬಳಿ ಬಂದು ನಡೆದುಕೊಂಡು ಹೋಗುತ್ತಿದ್ದ ಕೋನ್‌ಸ್ಟಾಸ್ ಭುಜಕ್ಕೆ ಬೇಕಂತಲೇ ಗುದ್ದಿ ಬಳಿಕ ಕಿರಿಕ್ ಮಾಡಿದರು. ಈ ಘಟನೆಯ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮ್ಯಾಚ್ ರೆಫರಿ ಕೊಹ್ಲಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಹ್ಲಿ ತಮ್ಮ ತಪ್ಪು ಒಪ್ಪಿಕೊಂಡಿದ್ದು, ಹೀಗಾಗಿ ದಂಡದ ಶಿಕ್ಷೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ತಪ್ಪಿಗಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಲಾಗಿದ್ದು, ಇದರ ಜತೆಗೆ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿ ಮುಂಬರುವ ಇನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಶಿಸ್ತಿನಿಂದ ಆಡಬೇಕಾಗುತ್ತದೆ. ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಾಯಿಂಟ್ಸ್ ಪಡೆದರೆ, ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಹೀಗಾಗಿ ಮತ್ತೆ ಡಿಮೆರಿಟ್ ಪಾಯಿಂಟ್ಸ್ಗೆ ಒಳಗಾಗದಂತೆ ಕೊಹ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಕಿರಿಯ ಆಟಗಾರರ ಜತೆ ಕೀಳು ಮಟ್ಟದ ವರ್ತನೆ ತೋರಿದ ಕೊಹ್ಲಿಗೆ ಹಲವು ಮಾಜಿ ಆಟಗಾರರು ಛೀಮಾರಿ ಹಾಕಿದ್ದಾರೆ. ಪಂದ್ಯದಲ್ಲಿ ಒಟ್ಟು 65 ಎಸೆತ ಎದುರಿಸಿದ ಕೋನ್‌ಸ್ಟಾಸ್ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 60 ರನ್ ಚಚ್ಚಿದರು.