ಲಕ್ನೋ: ಭಾರತ ಕ್ರಿಕೆಟ್ ತಂಡದ ಹಿರಿಯ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದು ಸುಮಾರು ಸಮಯ ಕಳೆದಿದೆ. ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ಬಗ್ಗೆ ವಿಶ್ವ ಕ್ರಿಕೆಟ್ ಭಾರೀ ಚರ್ಚೆ ನಡೆಸುತ್ತಿದೆ. ಹಲವಾರು ಮಾಜಿ ಆಟಗಾರರು ಕೊಹ್ಲಿ ಆಡಿದ್ದು ಸಾಕು, ನಿವೃತ್ತಿ ಪಡೆದು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುತ್ತಿದ್ದಾರೆ. ಈ ಕುರಿತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೊಹ್ಲಿ ತಮ್ಮ ಕುಟುಂಬ ಸಮೇತ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಹೌದು ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಲ್ಲಿ ಪ್ರತಿ ಬಾರಿ ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡಾಗ ಪತ್ನಿ ಅನುಷ್ಕಾ ಶರ್ಮಾ ಜತೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಅಚ್ಚರಿ ಎಂದರೆ ಕೊಹ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ಆ ಬಳಿಕ ಆಡಿದ ಸರಣಿಯಲ್ಲಿ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ಗೆ ಮರಳುತ್ತಿದ್ದರು. ಇದೀಗ ಮತ್ತೆ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ಉತ್ತರದ ಪ್ರದೇಶದ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಹೀಗಾಗಿ ಕೊಹ್ಲಿ ಅಭಿಮಾನಿಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರಿಸಲಿದ್ದಾರೆ ಎನ್ನಲಾರಂಭಿಸಿದ್ದಾರೆ.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ!
ಪ್ರೇಮಾನಂದ ಜಿ ಮಹಾರಾಜ್ ಅವರು ಕೊಹ್ಲಿಗೆ ಆಶೀರ್ವಾದ ನೀಡಿದ ಬಳಿಕ ಕೆಲ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ಕ್ರಿಕೆಟ್ ಕೂಡ ಆಧ್ಯಾತ್ಮಿಕ ಅಭ್ಯಾಸ ಎಂದು ಬಣ್ಣಿಸಿದ ಪ್ರೇಮಾನಂದ ಜಿ, ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು. ಈ ಮೂಲಕ ನೀವೇನು ಸಾಧಿಸಬೇಕೆಂದು ಬಯಸುತ್ತಿರೋ ಅದನ್ನು ಮುಟ್ಟಬಹುದು ಎಂದು ಸಲಹೆ ನೀಡಿದರು.
‘ಅಭ್ಯಾಸ ಬಲಪಡಿಸುವುದು ನಿಮ್ಮ ಕರ್ತವ್ಯ. ನಿಮ್ಮ ಆಟದಿಂದ ಇಡೀ ಭಾರತ ಸಂತೋಷಪಡುತ್ತದೆ. ಹೀಗಾಗಿ ನಿಮ್ಮ ಅಭ್ಯಾಸದಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದರ ಜತೆ ದೇವರ ಸ್ಮರಣೆ ಕೂಡ ಇರಲಿ. ಇದುವೇ ನಿಮ್ಮ ಸಾಧನ’ ಎಂದು ಕೊಹ್ಲಿಗೆ ಆಶೀರ್ವಚನ ನೀಡಿದರು.