Friday, 22nd November 2024

ಕಳಪೆ ಫಾರ್ಮ್: ಟೀಮ್ ಇಂಡಿಯಾ ಮಾಜಿ ನಾಯಕನಿಗೆ ವಿಶ್ರಾಂತಿಯೇ…?

ಮುಂಬೈ: ಟೀಮ್ ಇಂಡಿಯಾ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಚರ್ಚಿಸಲಿದೆ ಎಂಬ ಮಾಹಿತಿ ಯೊಂದು ಹೊರ ಬಿದ್ದಿದೆ.

ದಕ್ಷಿಣ ಆಫ್ರಿಕಾ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್​ಗಳ ಸರಣಿಗಾಗಿ ಸಜ್ಜಾಗು ತ್ತಿದ್ದಾರೆ. ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿ ಆಡಲಿದೆ. ಆದರೆ ಈ ಸರಣಿಗೆ ತೆರಳುವ ತಂಡದಿಂದ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯು ಕೊಹ್ಲಿಯ ಜೊತೆ ಮಾತುಕತೆ ನಡೆಸಲಿದ್ದು, ಈ ವೇಳೆ ವಿಶ್ರಾಂತಿ ಬಗ್ಗೆ ಚರ್ಚಿಸಲಾಗುತ್ತದೆ ಎಂದು ವರದಿಯಾಗಿದೆ.

ಐಪಿಎಲ್​ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಆಡಿದ್ದು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವನ್ನು ಮಾತ್ರ. ಇದೀಗ ಇಂಗ್ಲೆಂಡ್ ವಿರುದ್ದ 2 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಷ್ಟೇ ಆಡಬೇಕಿದೆ.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವ ಮುನ್ಸೂಚನೆ ಎಂದು ಕೂಡ ಆಯ್ಕೆ ಸಮಿತಿಯ ಈ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ. ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 31 ರನ್​ ಮಾತ್ರ ಕಲೆಹಾಕಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ ಭಾರತದ ಪರ 10 ಟಿ20 ಪಂದ್ಯಗಳನ್ನು ಆಡಿದ್ದರು. ಈ ವೇಳೆ 279 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆ ಹಾಕಿದ್ದು ಕೇವಲ 368 ರನ್​ ಮಾತ್ರ.

ಇದೀಗ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸದಿದ್ದರೆ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಟಿ20 ವಿಶ್ವಕಪ್​ಗೆ ತಿಂಗಳುಗಳು ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುತ್ತಿರುವುದೇ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ.

ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಶುರುವಾಗಲಿದ್ದು, ಅದಕ್ಕೂ ಮುನ್ನ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭ ದಲ್ಲಿ ಆಯ್ಕೆ ಸಮಿತಿಯು ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ವಿಶ್ರಾಂತಿ ನೀಡಲು ಮುಂದಾಗುತ್ತಿರುವುದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಸದ್ಯ ಇಂಗ್ಲೆಂಡ್​ನಲ್ಲಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ತಂಡವನ್ನು ಪ್ರಕಟಿಸುವ ಮುನ್ನ ವಿರಾಟ್ ಕೊಹ್ಲಿ ಜೊತೆ ಚರ್ಚಿಸಲಿದ್ದಾರೆ.  ಎಂಬ ವಿಚಾರ ಬಹಿರಂಗವಾಗಿದೆ.

ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳಾಪಟ್ಟಿ 

ಏಕದಿನ ಸರಣಿ ವೇಳಾಪಟ್ಟಿ:

ಜುಲೈ 22- ಮೊದಲ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)
ಜುಲೈ 24- 2ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)
ಜುಲೈ 27- 3ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಟಿ20 ಸರಣಿ ವೇಳಾಪಟ್ಟಿ:

ಜುಲೈ 29 – ಮೊದಲ ಟಿ20 ಪಂದ್ಯ (ಲಾರಾ ಕ್ರಿಕೆಟ್ ಸ್ಟೇಡಿಯಂ)
ಆಗಸ್ಟ್ 1​- 2ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್ ಸ್ಟೇಡಿಯಂ)
ಆಗಸ್ಟ್​ 2- 3ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್)
ಆಗಸ್ಟ್​ 6- 4ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)
ಆಗಸ್ಟ್ 7- 5ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)