ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ವಿರುದ್ಧ ಸಾಗುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಪ್ರೇಕ್ಷಕನೊಬ್ಬ ಮಧ್ಯಪ್ರವೇಶಿದ ಕಾರಣ ಪಂದ್ಯಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು. ಭಾರತ ತಂಡ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಹೆಗಲ ಮೇಲೆ ಕೈ ಹಾಕಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದು ಭದ್ರತಾ ಸಿಬ್ಬಂದಿಐ ವೈಫಲ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಫ್ರೀ ಉಕ್ರೇನ್’ ಟೀಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ ನೇರವಾಗಿ ಕೊಹ್ಲಿ ಬಳಿ ಬಂದು ಹೆಗಲ ಮೇಲೆ ಕೈ ಹಾಕಿದ್ದಾನೆ. ಭದ್ರತಾ ಸಿಬ್ಬಂದಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಆತ ಅವರ ಮುಂದೆ ನೃತ್ಯ ಮಾಡಿ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಈತನ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ. ಕೆಲ ವರ್ಷಗಳಿಂದ ನಿರಂತರವಾಗಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಹೀಗಾಗಿ ಉಕ್ರೇನ್ ಉಳಿಸುವ ಅಭಿಯಾನವನ್ನು ವಿಶ್ವದಾದ್ಯಂತ ಗಮನಸೆಳೆಯುವ ಕಾರಣದಿಂದ ಈತ ಸ್ಟಾರ್ ಆಟಗಾರ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ಮೈದಾನಕ್ಕೆ ಓಡಿ ಬಂದು ಅವರ ಹೆಗಲ ಮೇಲೆ ಕೈ ಹಾಕಿದಂತಿದೆ.
ಇದನ್ನೂ ಓದಿ Sachin Tendulkar: ಸಚಿನ್ ತೆಂಡೂಲ್ಕರ್‌ಗೆ ಎಂಸಿಸಿ ಕ್ಲಬ್ ಸದಸ್ಯತ್ವ ಗೌರವ
2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪ ಪಂದ್ಯದ ವೇಳೆಯೂ ಅಭಿಮಾನಿಯೊಬ್ಬ ಫ್ರೀ ಫ್ಯಾಲಿಸ್ತಾನ್ ಎಂದು ಬರೆದಿದ್ದ ಟೀ ಶರ್ಟ್ ಧರಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಬಾರಿ ವಿರಾಟ್ ಕೊಹ್ಲಿ ಅನಗತ್ಯವಾಗಿ ಸುದ್ದಿಯಾಗುತ್ತಿದ್ದಾರೆ. ಗುರುವಾರ ಮೊದಲ ದಿನದಾಟದಲ್ಲಿ ಆಸೀಸ್ ಬ್ಯಾಟರ್ ಸ್ಯಾಮ್ ಕೋನ್‌ಸ್ಟಾಸ್ ಜತೆ ಅನಗತ್ಯವಾಗಿ ಕಿರಿಕ್ ಮಾಡಿಕೊಂಡು ದಂಡದ ಶಿಕ್ಷೆಗೆ ಗುರಿಯಾಗಿದ್ದ ಕೊಹ್ಲಿ, ಈ ತಪ್ಪಿನಿಂದ ಇನ್ನೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಶುಕ್ರವಾರದ ದ್ವಿತೀಯ ದಿನದಾಟದಲ್ಲಿ ಪ್ರೇಕ್ಷಕರ ಜತೆ ವಾಗ್ವಾದ ನಡೆಸಿ ಮತ್ತೆ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಔಟ್ ಆಗಿ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ವೇಳೆ ಆಸೀಸ್ ಪ್ರೇಕ್ಷಕರು ಚೀರಾಡುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಕೊಹ್ಲಿ ವಾಪಸ್ ಮೈದಾನದತ್ತ ಬಂದು ಪ್ರೇಕ್ಷಕರ ಜತೆ ವಾಗ್ವಾದಕ್ಕಿಳಿದರು. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ಕೆಲ ಭದ್ರತಾ ಅಧಿಕಾರಿಗಳು ಕೊಹ್ಲಿಯನ್ನು ತಡೆದು ಸಮಾಧಾನಿಸಿ ಡ್ರೆಸ್ಸಿಂಗ್ ರೂಮ್‌ನತ್ತ ಕಳುಹಿಸಿಕೊಟ್ಟರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.