Thursday, 19th September 2024

Virat Kohli: ಕೊಹ್ಲಿ-ಗಂಭೀರ್‌ ನಡುವೆ ವಿಶೇಷ ಸಂದರ್ಶನ; ಆನ್ ಫೀಲ್ಡ್ ಜಗಳದ ಬಗ್ಗೆ ಮುಕ್ತ ಮಾತು

Virat Kohli

ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಾಳೆ(ಗುರುವಾರ) ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ವಿರಾಟ್‌ ಕೊಹ್ಲಿ(Virat Kohli) ವಿಶೇಷ ಸಂದರ್ಶನವೊಂದನ್ನು ನಡೆಸಿದ್ದರೆ. ಉಭಯ ಆಟಗಾರರು ನಡೆಸಿದ ಈ ಸಂದರ್ಶನದ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೊ ವೈರಲ್‌ ಆಗಿದೆ.

ಐಪಿಎಲ್‌ ವೇಳೆ ಗಂಭೀರ್​ ಮತ್ತು ಕೊಹ್ಲಿ ನಡುವೆ ಆಗಾಗ ಆನ್ ಫೀಲ್ಡ್ ಜಗಳ ಆಗುತ್ತಲೇ ಇರುತ್ತಿತ್ತು. ಇಬ್ಬರು ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಕೂಡ ಗಂಭೀರ್ ಪ್ರದರ್ಶಿಸಿದ್ದರು. ಹೀಗಾಗಿ ಗಂಭೀರ್‌ ಭಾರತ ತಂಡಕ್ಕೆ ಕೋಚ್‌ ಆಗುವಾಗ ಅನೇಕರು ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇಬರಿಬ್ಬರು ಈಗ ಆತ್ಮೀಯವಾಗಿ ಕಾಣಿಸಿಕೊಂಡಿರುವುದನ್ನು ಕಂಡು ಎಲ್ಲರಿಗೂ ಅಚ್ಚರಿಯಾಗಿದೆ. ಕೆಲ ನೆಟ್ಟಿಗರು ಇದು ದೆಹಲಿ ಹುಡುಗರ ನಂಟು! ಎಂದು ಬಣ್ಣಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರು ಗಂಭೀರ್(Gautam Gambhir)​ ಜತೆ ಬ್ಯಾಟಿಂಗ್​ ಮಾರ್ಗದರ್ಶನ ಮತ್ತು ಆತ್ಮೀಯವಾಗಿ ಚರ್ಚಿಸುತ್ತಿರುವ ಫೋಟೊವನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಟೀಮ್‌ ಇಂಡಿಯಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಹಂಚಿಕೊಂಡ ವಿಡಿಯೊದಲ್ಲಿ ಕೊಹ್ಲಿ ಮತ್ತು ಗಂಭೀರ್‌ ಪರಸ್ಪರ ಕ್ರಿಕೆಟ್‌ ಸಾಧನೆ ಮತ್ತು 2011ರ ಏಕದಿನ ವಿಶ್ವಕಪ್‌ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಇದನ್ನೂ ಓದಿ Virat Kohli: ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

ಇದೇ ವೇಳೆ ತಮ್ಮಿಬ್ಬರ ಬಗ್ಗೆ ನೆಟ್ಟಿಗರು ಮಾತನಾಡುವ ಆನ್ ಫೀಲ್ಡ್ ಜಗಳದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಉಭಯ ಆಟಗಾರರು ನಮ್ಮ ಮಧ್ಯೆ ಯಾವುದೇ ದ್ವೇಷವಿಲ್ಲ. ನಾವಿಬ್ಬರು ಅಗ್ರೆಸಿವ್‌ ಆಟಗಾರರಾದ ಕಾರಣ ಆಟದ ವೇಳೆ ಕೊಂಚ ಸಿಟ್ಟಿಗೆದ್ದಂತೆ ತೋರುತ್ತದೆ. ಆದರೆ ಇದಕ್ಕೆ ನೆಟ್ಟಿಗರು ಮಸಾಲ ಸೇರಿಸಿ ಘಟನಮೆಯನ್ನು ದೊಡ್ಡದಾಗಿ ಮಾಡುತ್ತಾರೆ ಎಂದು ಹೇಳುವ ಮೂಲಕ ಜೋರಾಗಿ ನಕ್ಕರು. ಇದೇ ವೇಳೆ ಕೊಹ್ಲಿ ಗಂಭೀರ್‌ ಕ್ರಿಕೆಟ್‌ ಸಾಧನೆಯನ್ನು ಹೊಗಳಿದರೆ, ಗಂಭೀರ್‌ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದರು.

ಸಂದರ್ಶನದಲ್ಲಿ ಕೊಹ್ಲಿ ಅವರು ಗಂಭೀರ್‌ಗೆ ನೀವು ಬ್ಯಾಟಿಂಗ್‌ ನಡೆಸುವಾಗ ಎದುರಾಳಿ ತಂಡದ ಆಟಗಾರರು ಮತ್ತು ಬೌಲರ್‌ ಜತೆ ಹಲವು ಬಾರಿ ಅಗ್ರೆಸಿವ್‌ ಆಗುತ್ತೀರಿ ಏಕೆ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ನಗುತ್ತಲೇ ಉತ್ತರ ನೀಡಿದ ಗಂಭೀರ್‌ ಈ ಪ್ರಶ್ನೆಗೆ ನನಗಿಂತ ಉತ್ತಮವಾಗಿ ನೀವು ಉತ್ತರ ನೀಡಬಹುದು. ಏಕೆಂದರೆ ನನಗಿಂತ ಹೆಚ್ಚು ನೀವು ಅಗ್ರೆಸಿವ್‌ ಆಟಗಾರ ಎಂದರು. ಈ ವೇಳೆ ಕೊಹ್ಲಿ ಕೂಡ ನಕ್ಕರು.

ವಿರಾಟ್​ ಕೊಹ್ಲಿ ಅವರ ಆರಂಭಿಕ ಕ್ರಿಕೆಟ್​ ಜರ್ನಿಯಲ್ಲಿ ಗಂಭೀರ್​ ಅವರು ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಕ್ರೀಡಾಸ್ಫೂರ್ತಿ ಮರೆದಿದ್ದರು. ಅಲ್ಲದೆ ಯುವ ಕ್ರಿಕೆಟಿಗರಿಗೆ ಈ ರೀತಿಯ ಗೌರವ ನೀಡಿದರೆ ಅವರು ಮುಂದೆ ಶ್ರೇಷ್ಠ ಕ್ರಿಕೆಟ್​ ಆಟಗಾರರಾಗಿ ಬೆಳೆಯುತ್ತಾರೆ ಎಂದಿದ್ದರು.