Sunday, 15th December 2024

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ಇಂದು

ದುಬೈ: ಈ ಸಲದ ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸುತ್ತಿರುವ ಕೊಹ್ಲಿ ಬಳಗವೇ ‘ಕಪ್’ ಗೆಲ್ಲುತ್ತದೆ ಎಂಬ ಭಾವನೆ ಗಟ್ಟಿಯಾಗುತ್ತಿದೆ.

ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವುದೇ, ರಾಜಸ್ಥಾನ ರಾಯಲ್ಸ್ ಎದುರು ಅರ್ಧಶತಕ ಗಳಿಸಿದ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಸೋಮವಾರ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ನಡೆಯು ವುದು ಖಚಿತ. ಟೂರ್ನಿಯಲ್ಲಿ ಡೆಲ್ಲಿ ಮತ್ತು ಬೆಂಗಳೂರು ತಂಡದ ಸಾಧನೆ ಸಮಬಲವಾಗಿದೆ. ಉಭಯ ತಂಡಗಳು ತಲಾ ಆರು ಪಾಯಿಂಟ್ ಗಳಿಸಿವೆ. ರನ್‌ ರೇಟ್‌ನಲ್ಲಿ ಡೆಲ್ಲಿ ಮುಂದಿದೆ. ಈ ಪಂದ್ಯ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಡೆಲ್ಲಿ ತಂಡದ ಬ್ಯಾಟಿಂಗ್ ಪಡೆ ಬಲಿಷ್ಠ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರಿಷಭ್ ಪಂತ್ ಅವರ ಆಟದಿಂದಾಗಿ ಕಳೆದ ಪಂದ್ಯದಲ್ಲಿ ತಂಡವು 228 ರನ್ ಗಳಿಸಿತ್ತು. ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಎನ್ರಿಚ್ ನೋರ್ಟಿಯೆ ಮತ್ತು ಸ್ಪಿನ್ನರ್‌ ಆರ್. ಅಶ್ವಿನ್ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದರೆ ಎದುರಾಳಿಗಳ ಮೇಲೆ ಒತ್ತಡ ಹೆಚ್ಚುತ್ತದೆ. ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್, ಕರ್ನಾಟಕದ ದೇವದತ್ತ ಪಡಿಕ್ಕಲ್ ಈಗಾಗಲೇ ಮೂರು ಅರ್ಧಶತಕಗಳನ್ನು ದಾಖಲಿಸಿದ್ದಾರೆ.