Friday, 20th December 2024

ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ತೀವ್ರ ಪೈಪೋಟಿ

ನವದೆಹಲಿ: ಜಯ್​ ಶಾ(Jay Shah) ಅವರು ಐಸಿಸಿ ಅಧ್ಯಕರಾಗಿ ಅಧಿಕಾರ ಸ್ವೀಕರಿಸಿದ್ದು, ಇದೀಗ ಅವರಿಂದ ತೆರವಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಹುದ್ದಗೆ ಯಾರು ಆಯ್ಕೆಯಾಗಲಿದ್ದಾರೆ(Who is the next BCCI secretary) ಎಂಬ ಚರ್ಚೆ ಜೋರಾಗಿದೆ. ಸದ್ಯ ಬಿಸಿಸಿಐ ಮುಂದಿನ ಕಾರ್ಯದರ್ಶಿ ಸ್ಥಾನಕ್ಕೆ ಚರ್ಚೆಯಾಗಿರುವ 2–3 ಹೆಸರುಗಳಲ್ಲಿ ಧುಮಾಲ್‌ ಅವರ ಹೆಸರೂ ಒಳಗೊಂಡಿದೆ. ಖಜಾಂಚಿ ಆಶಿಷ್‌ ಶೆಲ್ಲಾರ್ ಮತ್ತು ಜಂಟಿ ಕಾರ್ಯದರ್ಶಿ ದೇವಜಿತ್ ಲೊನ್ ಸೈಕಿಯಾ, ಗುಜರಾತ್‌ನ ಅನಿಲ್ ಪಟೇಲ್ ಅವರ ಹೆಸರೂ ಈ ಹುದ್ದೆಗೆ ಬಲವಾಗಿ ಕೇಳಿಬಂದಿದೆ.

ಆರಂಭದಲ್ಲಿ ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಅವರ ಪುತ್ರ ರೋಹನ್​ ಜೇಟ್ಲಿ ಅವರ ಹರಸರು ಕೇಳಿ ಬಂದಿತ್ತು. ಆದರೆ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಲು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು 2ನೇ ಅವಧಿಗೆ ಡಿಡಿಸಿಎಯಲ್ಲೇ ಮುಂದುವರಿಯುವ ನಿರೀಕ್ಷೆ ಅಧಿಕವಾಗಿದ್ದು ಬಿಸಿಸಿಐ ಕಾರ್ಯದರ್ಶಿಯಾಗುವ ಸಾಧ್ಯತೆ ಕ್ಷೀಣಿಸಿದೆ. ಡಿಡಿಸಿಎ ಚುನಾವಣೆ ಡಿಸೆಂಬರ್​ 13-15ರ ನಡುವೆ ನಡೆಯಲಿದ್ದು, ಡಿಸೆಂಬರ್​ 16ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ Rohan Jaitley: ಅರುಣ್‌ ಜೇಟ್ಲಿ ಪುತ್ರ ಬಿಸಿಸಿಐ ನೂತನ ಕಾರ್ಯದರ್ಶಿ?

ಡಿಡಿಸಿಎ ಅಧ್ಯಕ್ಷ ಹುದ್ದೆಗೆ ರೋಹನ್​ ಜೇಟ್ಲಿಗೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಕೀರ್ತಿ ಆಜಾದ್​ ಪ್ರತಿಸ್ಪರ್ಧೆ ಒಡ್ಡಲಿದ್ದಾರೆ. ರೋಹನ್​ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಕೀರ್ತಿ ಆಜಾದ್​ ಡಿಡಿಸಿಎ ಚುನಾವಣೆಯ ಕಾವು ಏರಿಸಿದ್ದಾರೆ. ಒಂದೊಮ್ಮೆ ರೋಹನ್​ ಜೇಟ್ಲಿ ಚುನಾವಣೆಯಲ್ಲಿ ಸೋತರೆ ಆಗ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಕಳೆದ ಭಾನುವಾರ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಚಾಂಪಿಯನ್ಸ್ ಟ್ರೋಫಿ ಸುತ್ತ ಕವಿದಿರುವ ಗೊಂದಲಗಳನ್ನು ಪರಿಹರಿಸುವುದು, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆ ಅವರ ಮುಂದಿರುವ ಪ್ರಮುಖ ಗುರಿಯಾಗಿದೆ. ಐಸಿಸಿ ಅಧ್ಯಕ್ಷ ಹುದ್ದೆಗೇರಿದ ಭಾರತದ ಐದನೇ ಮತ್ತು ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ. ಅವರು ಐಸಿಸಿ ಮಂಡಳಿ ನಿರ್ದೇಶಕರ ಸರ್ವಾನುಮತದ ಆಯ್ಕೆಯಾಗಿದ್ದರು.