Sunday, 15th December 2024

ವಿಂಡೀಸ್‌ ತಂಡಕ್ಕೆ ಒಂದು ವಿಕೆಟ್‌ ಗೆಲುವು

ಕಿಂಗ್ಸ್‌ಟನ್: ಅನುಭವಿ ಬೌಲರ್‌ ಕೆಮರ್ ರೋಚ್ ಮತ್ತು ಜೇಡನ್ ಸೀಲ್ಸ್‌ ಕೊನೆಯ ವಿಕೆಟ್‌ಗೆ 17 ರನ್‌ಗಳ ಜೊತೆಯಾಟವಾಡಿ ವಿಂಡೀಸ್‌ ತಂಡಕ್ಕೆ ಒಂದು ವಿಕೆಟ್‌ ಗೆಲುವು ತಂದುಕೊಟ್ಟರು.  ಈ ಮೂಲಕ ವೆಸ್ಟ್ ಇಂಡೀಸ್‌ ತಂಡಕ್ಕೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಆಸರೆಯಾದರು.

ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ 168 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ಒಂದು ಹಂತದಲ್ಲಿ 16 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಈ ಹಂತದಲ್ಲಿ ಜರ್ಮೈನ್ ಬ್ಲ್ಯಾಕ್‌ವುಡ್ ಅರ್ಧಶತಕ ಗಳಿಸಿ ಇನಿಂಗ್ಸ್‌ಗೆ ಬಲ ತುಂಬಿದರು. ಚಹಾ ವಿರಾಮದ ವೇಳೆ 114ಕ್ಕೆ 7 ವಿಕೆಟ್ ಕಳೆದುಕೊಂಡು ತಂಡ ಆತಂಕದಲ್ಲಿತ್ತು.

ಕೊನೆಯ ಅವಧಿಯಲ್ಲಿ ತಂಡದ ಗೆಲುವಿಗೆ 54 ರನ್‌ ಬೇಕಾಗಿತ್ತು. ಕೆಮರ್ ರೋಚ್ ಮತ್ತು ಜೋಶುವಾ ಸಿಲ್ವಾ 26 ರನ್‌ ಸೇರಿಸಿ ಗೆಲುವಿನತ್ತ ಮುನ್ನಡೆದರು. ಕೊನೆಗೆ 30 ರನ್ ಗಳಿಸಿ ಅಜೇಯರಾಗಿ ಉಳಿದ ರೋಚ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಸೀಲ್ಸ್ ಅವರು ಮೊದಲ ಬಾರಿ ಐದು ವಿಕೆಟ್ ಗಳಿಸಿ ಮಿಂಚಿದ ಪರಿಣಾಮ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 203 ರನ್‌ಗಳಿಗೆ ಆಲೌಟಾಗಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 217; ವೆಸ್ಟ್ ಇಂಡೀಸ್‌: 253;

ಎರಡನೇ ಇನಿಂಗ್ಸ್‌: ಪಾಕಿಸ್ತಾನ: 203;

ವೆಸ್ಟ್ ಇಂಡೀಸ್‌: 56.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 168 (ರಾಸ್ಟನ್ ಚೇಸ್ 22, ಜೆರ್ಮೈನ್ ಬ್ಲ್ಯಾಕ್‌ವುಡ್ 55, ಜೇಸನ್ ಹೋಲ್ಡರ್ 16, ಜೋಶುವಾ ಸಿಲ್ವಾ 13, ಕೆಮರ್ ರೋಚ್ ಔಟಾಗದೆ 30; ಶಹೀನ್ ಶಾ ಅಫ್ರಿದಿ 50ಕ್ಕೆ4, ಹಸನ್ ಅಲಿ 37ಕ್ಕೆ3, ಫಾಹೀನ್ ಅಶ್ರಫ್ 29ಕ್ಕೆ2).

ವೆಸ್ಟ್ ಇಂಡೀಸ್‌ಗೆ 1 ವಿಕೆಟ್ ಜಯ