Wednesday, 11th December 2024

ಸೆಮೀಸ್‌’ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿರುವ ಮಹಿಳಾ ತಂಡ ವೀಗ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ರಾಣಿ ರಾಂಪಾಲ್ ಪಡೆಯು ಪದಕ ಸುತ್ತಿಗೆ ಪ್ರವೇಶಿಸಲಿದೆ ಎನ್ನಲಾಗಿತ್ತು. ಇದಕ್ಕೆ ತಕ್ಕಂತೆ ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್ ಪಂದ್ಯದ ಎರಡನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ದಾಖಲಿಸಿದ್ದರು. ಅಲ್ಲದೆ ಪಂದ್ಯದುದ್ಧಕ್ಕೂ ಅಮೋಘ ಆಟದ ಪ್ರದರ್ಶನ ನೀಡಿದ್ದರು.

ಆದರೆ ಭಾರತದ ಮಹಿಳಾ ಪಡೆಯ ಸವಾಲುಗಳಿಗೆ ಸ್ಪಷ್ಟ ಉತ್ತರ ನೀಡಿದ ಅರ್ಜೆಂಟೀನಾ ಮೇಲುಗೈ ಸಾಧಿಸಿತ್ತು. ಮಾರಿಯಾ ಬ್ಯಾರಿಯೊನ್ಯುವೊ ಪಂದ್ಯದ 18ನೇ ಹಾಗೂ 36ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನ ರೂವಾರಿಯೆನಿಸಿದರು.

ಈ ಹಿಂದೆ 1980ರಲ್ಲಿ ಭಾರತ ಮಹಿಳಾ ಬಳಗವು ಆರು ತಂಡಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿತ್ತು.