Wednesday, 27th November 2024

Women’s T20 World Cup: ಚಾಂಪಿಯನ್‌ ಕಿವೀಸ್‌ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ದುಬೈ: ಭಾನುವಾರ ರಾತ್ರಿ ದುಬೈನಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌(Women’s T20 World Cup) ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡ ದಕ್ಷಿಣ ಆಫ್ರಿಕಾವನ್ನು(New Zealand vs South Africa) ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ವಿಜೇತ ತಂಡಕ್ಕೆ ಮತ್ತು ರನ್ನರ್‌ ಅಪ್‌ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು(Women’s T20 World Cup Prize Money) ಎಂಬ ಕ್ರಿಕೆಟ್‌ ಅಭಿಮಾನಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಮಾನತೆಯ ದ್ಯೋತಕವಾಗಿ ಈ ಬಾರಿ ಪುರುಷರ ವಿಶ್ವಕಪ್‌ ತಂಡದಷ್ಟೇ ಬಹುಮಾನ ಮೊತ್ತವನ್ನು ಮಹಿಳಾ ವಿಶ್ವಕಪ್‌ ವಿಜೇತರಿಗೂ ನೀಡುವುದು ಐಸಿಸಿ ಘೋಷಿಸಿತ್ತು. ಅದರಂತೆ ಈ ಬಾರಿಯ ವಿಜೇತ ತಂಡ ನ್ಯೂಜಿಲ್ಯಾಂಡ್‌ಗೆ 2.34 ಮಿಲಿಯನ್‌ ಡಾಲರ್‌, ಅಂದರೆ 19.6 ಕೋಟಿ ರೂ. ಮೊತ್ತ ಲಭಿಸಿದೆ. ರನ್ನರ್‌ ಅಪ್‌ ದಕ್ಷಿಣ ಆಫ್ರಿಕಾ ತಂಡಕ್ಕೆ 1.17 ಮಿ.ಡಾಲರ್‌ ಅಂದರೆ 9.8 ಕೋಟಿ ರೂ. ಸಿಕ್ಕಿದೆ. ಸೆಮಿಫೈನಲ್‌ನಲ್ಲಿ ಸೋಲು ಕಂಡ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ತಂಡ ತಲಾ 5.65 ಕೋಟಿ ಬಹುಮಾನ ಪಡೆದಿದೆ.

ಗುಂಪು ಹಂತದ ಒಂದು ಪಂದ್ಯವನ್ನು ಗೆದ್ದ ಪ್ರತಿ ತಂಡಕ್ಕೆ 26.19 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ನ್ಯೂಜಿಲೆಂಡ್ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದಿದ್ದರಿಂದ ಹೆಚ್ಚುವರಿಯಾಗಿ 78 ಲಕ್ಷ ರೂ. ಹಣ ಸಿಕ್ಕಿದೆ. ದಕ್ಷಿಣ ಆಫ್ರಿಕಾ ಕೂಡ ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಇದರಿಂದ ಹೆಚ್ಚುವರಿಯಾಗಿ 78 ಲಕ್ಷ ರೂ. ಹಣ ಸಿಕ್ಕಿದೆ. ಲೀಗ್‌ ಸುತ್ತಿನ 4 ಪಂದ್ಯಗಳ ಪೈಕಿ 2 ರಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ 2.25 ಕೋಟಿ ರೂ. ಬಹುಮಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದನ್ನೂ ಓದಿ IND vs NZ 2nd Test: ಕಿವೀಸ್‌ ಟೆಸ್ಟ್‌ನಿಂದ ರಿಷಭ್‌ ಪಂತ್‌ ಔಟ್‌?

ಫೈನಲ್‌ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ಬ್ಯಾಟಿಂಗ್‌ನಲ್ಲಿ ಸುಜಿ ಬೇಟ್ಸ್ 32, ಜಾರ್ಜಿಯಾ ಪ್ಲಿಮ್ಮರ್ 9, ಅಮೆಲಿಯಾ ಕೆರ್ 43, ನಾಯಕಿ ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 38, ಮ್ಯಾಡಿ ಗ್ರೀನ್ ಔಟಾಗದೆ 12 ಮತ್ತು ಇಸಾಬೆಲ್ಲಾ ಗೇಜ್ 3 ರನ್ ಕೊಡುಗೆ ಸಲ್ಲಿಸಿದರು. ಹರಿಣಗಳ ಪರ ಬೌಲಿಂಗ್ ನಲ್ಲಿ ನಾನ್ಕುಲುಲೆಕೊ ಮ್ಲಾಬಾ 2 ವಿಕೆಟ್ ಕಿತ್ತರು. ಕ್ಲೋಯ್ ಟ್ರಯಾನ್ ಮತ್ತು ಅಯಬೊಂಗ ಖಾಕಾ ತಲಾ ಒಂದು ವಿಕೆಟ್ ಪಡೆದರು.

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ ಉತ್ತಮ ಆರಂಭದ ಹೊರತಾಗಿಯೂ 9 ವಿಕೆಟ್‌ಗೆ 126 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ಲಾರಾ ವೊಲ್ವಾರ್ಟ್‌(33) ಹಾಗೂ ತಜ್ಮೀನ್‌ ಬ್ರಿಟ್ಸ್‌(17) ಪವರ್‌-ಪ್ಲೇನಲ್ಲಿ 47 ರನ್‌ ಸಿಡಿಸಿದರು. ಆದರೆ ಬ್ರಿಟ್ಸ್‌ ಔಟಾದ ಬಳಿಕ ತಂಡ ದಿಢೀರ್‌ ಕುಸಿತಕ್ಕೆ ಒಳಗಾಯಿತು. ಸತತ ವಿಕೆಟ್‌ ಕಳೆದುಕೊಂಡ ತಂಡ ಒತ್ತಡಕ್ಕೊಳಗಾಗಿ ಟ್ರೋಫಿ ಕೈ ಚೆಲ್ಲಿತು.