Monday, 6th January 2025

D Gukesh: ವಿಶ್ವ ಚೆಸ್‌ ಚಾಂಪಿಯನ್‌ ಡಿ ಗುಕೇಶ್‌ಗೆ 5 ಕೋಟಿ ರೂ ನಗದು ಬಹುಮಾನ ಘೋಷಿಸಿದ ಎಂಕೆ ಸ್ಟಾಲಿನ್‌!

World Chess Champion D Gukesh Will Get 5 Crore Cash Prize From Tamil Nadu Chief Minister Mk Stalin

ಚೆನ್ನೈ: ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತದ ಹಾಗೂ ಚೆನ್ನೈ ಮೂಲದ ಡಿ ಗುಕೇಶ್‌ಗೆ (D Gukesh) ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶುಕ್ರವಾರ 5 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಚೆನ್ನೈ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಗುರುವಾರ ಸಿಂಗಾಪುರದಲ್ಲಿ ನಡೆದಿದ್ದ ಪ್ರಶಸ್ತಿ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ 18ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.

ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ನಂತರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ವಿಶ್ವ ಕಿರಿಯ ಚೆಸ್ ಚಾಂಪಿಯನ್ ಡಿ ಗುಕೇಶ್ ಅವರ ಅದ್ಭುತ ಸಾಧನೆಯನ್ನು ಗೌರವಿಸಲು 5 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಸ್ಟಾಲಿನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವರ ಐತಿಹಾಸಿಕ ವಿಜಯವು ರಾಷ್ಟ್ರಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ನೀಡಿದೆ. ಅವರು ಭವಿಷ್ಯದಲ್ಲಿ ಬೆಳಗಲಿ ಮತ್ತು ಹೊಸ ಎತ್ತರವನ್ನು ಮುಟ್ಟಲಿ ಎಂದು ಗುಣಗಾನ ಮಾಡಿದ್ದಾರೆ.

ಪೈಪೋಟಿಗೆ ಬಿದ್ದಿರುವ ಚಂದ್ರಬಾಬು ನಾಯ್ಡು-ಎಂಕೆ ಸ್ಟಾಲಿನ್‌

ಗುಕೇಶ್‌ ದೊಮ್ಮರಾಜು ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ ಹಾಗೂ ಇಡೀ ದೇಶವೇ ಅತ್ಯಂತ ಕಿರಿಯ ಚೆಸ್‌ ಚಾಂಪಿಯನ್‌ಗೆ ಶುಭಾಶಯಗಳ ಸುರಿ ಮಳೆಗೈಯುತ್ತಿದೆ. ಇದರ ನಡುವೆ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಡಿ ಗುಕೇಶ್‌ ಅವರನ್ನು ಅಭಿನಂದಿಸಿದ್ದಾರೆ.

“ನಮ್ಮ ತಮಿಳು ಹುಡುಗ ನಮ್ಮ ಹೆಮ್ಮೆ,” ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಬರೆದಿದ್ದರೆ, ಮತ್ತೊಂದೆಡೆ ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, “ಗುಕೇಶ್‌ ತೆಲುಗು ಹುಡುಗ. ಎಲ್ಲರಿಗೂ ಹೆಮ್ಮೆ ತಂದಿದ್ದಾನೆ,” ಎಂದು ಬರೆದುಕೊಂಡಿದ್ದಾರೆ. ಗುಕೇಶ್‌ ಅವರ ಮೂಲ ಮತ್ತು ಭಾಷೆಯ ವಿಚಾರದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು “ಗುಕೇಶ್‌ ನಮ್ಮವನು” ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಮುಖ್ಯಮಂತ್ರಿಗಳ ಪೋಸ್ಟ್‌ ಈಗ ಎಲ್ಲೆಡೆ ಸಾಕಷ್ಟು ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಓದಿ: D Gukesh: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಕಿರೀಟ ತೊಟ್ಟ 18 ವರ್ಷದ ಗುಕೇಶ್; ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ