Monday, 25th November 2024

WTC Points Table: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ; ಫೈನಲ್‌ ಆಸೆ ಜೀವಂತ

ದುಬೈ: ಪರ್ತ್‌ನಲ್ಲಿ(Perth Test) ಮುಕ್ತಾಯ ಕಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 295 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ, ಮರಳಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ(WTC Points Table) ಅಗ್ರಸ್ಥಾನಕ್ಕೇರಿದೆ. ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಸರಣಿ ಸೋಲಿನಿಂದ ಭಾರತ ಅಗ್ರಸ್ಥಾನದಿಂದ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಇಳಿದಿತ್ತು. ಇದೀಗ ಮತ್ತೆ ಈ ಸ್ಥಾನಕ್ಕೇರುವ ಮೂಲಕ ತ್ನ ಫೈನಲ್‌ ಆಸೆ ಜೀವಂತವಿರಿಸಿದೆ. ಸೋಲು ಕಂಡ ಆಸ್ಟ್ರೇಲಿಯಾ(57.69) 2ನೇ ಸ್ಥಾನಕ್ಕೆ ಜಾರಿದೆ. ಸದ್ಯ ಭಾರತ 61.11 ಗೆಲುವಿನ ಶೇಕಡಾವಾರು ಅಂಕ ಹೊಂದಿದೆ.

ಭಾರತ ಸದ್ಯ ಅಗ್ರಸ್ಥಾನದಲ್ಲಿದ್ದರೂ ಸತತ 3ನೇ ಬಾರಿ ಡಬ್ಲ್ಯುಟಿಸಿ ಫೈನಲ್​ಗೇರಬೇಕಾದರೆ ಇನ್ನೆಷ್ಟು ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರ ಇಲ್ಲಿದೆ. ಭಾರತ ಈ ಸರಣಿಯನ್ನು 4-0 ಅಥವಾ 5-0 ಅಂತರದಿಂದ ಗೆದ್ದರೆ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಒಂದೊಮ್ಮೆ ಭಾರತ 3-1/3-0/4-1ರಿಂದ ಗೆದ್ದರೆ, ಆಗ ಇತರ ತಂಡಗಳ ಸರಣಿಯ ಫಲಿತಾಂಶದ ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಭಾರತಕ್ಕೆ ಇನ್ನು ಯಾವುದೇ ಸರಣಿ ಇಲ್ಲ. ಆಗ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಸರಣಿಯಲ್ಲಿ​ ನ್ಯೂಜಿಲೆಂಡ್​ ಕನಿಷ್ಠ 1 ಟೆಸ್ಟ್​ನಲ್ಲಿ ಡ್ರಾಗೆ ತೃಪ್ತಿಪಡಬೇಕು. ಭಾರತ 2-0ಯಿಂದ ಗೆದ್ದರೆ, ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್​ ಕನಿಷ್ಠ 1 ಟೆಸ್ಟ್​ ಸೋಲಬೇಕು.

ಇದನ್ನೂ ಓದಿ IND vs AUS: ಪರ್ತ್‌ನಲ್ಲಿ ಆಸೀಸ್‌ ಪತನ; ಭಾರತಕ್ಕೆ ದಾಖಲೆಯ ಗೆಲುವು

ಒಂದೊಮ್ಮೆ 2-1/1-0ಯಿಂದ ಭಾರತ ಗೆದ್ದರೆ ಅಥವಾ 1-1 ಸಮಬಲವಾದರೆ ಆಗ ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್​ 1 ಟೆಸ್ಟ್​ ಮಾತ್ರ ಗೆಲ್ಲಬೇಕು ಮತ್ತು ಲಂಕಾ ಸರಣಿಯಲ್ಲಿ ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಪಂದ್ಯದಲ್ಲಿ 1 ಟೆಸ್ಟ್​ ಡ್ರಾ ಆಗಬೇಕು.

ಭಾರತ ಸರಣಿ ಸೋತರೆ

ಮೊದಲ ಪಂದ್ಯ ಗೆದ್ದ ಭಾರತ ಆ ಬಳಿಕದ ಪಂದ್ಯದಲ್ಲಿ 1-2/1-3 ಅಂತರದಿಂದ ಸೋತರೆ ಆಗ ಭಾರತ ಫೈನಲ್‌ ತಲುಪಲು ನ್ಯೂಜಿಲೆಂಡ್​ ವಿರುದ್ಧ ಇಂಗ್ಲೆಂಡ್​ ಸರಣಿ ಗೆಲ್ಲಬೇಕು ಮತ್ತು ದಕ್ಷಿಣ ಆಫ್ರಿಕಾ ತಂಡ ಲಂಕಾ ಎದುರು 1-1 ಸಮಬಲ, ಪಾಕಿಸ್ತಾನ​ ವಿರುದ್ಧ 0-2ರಿಂದ ಸೋಲಬೇಕು ಮತ್ತು ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ​ 2-0ಯಿಂದ ಗೆಲ್ಲಬೇಕು. ಏಕೆಂದರೆ ಶ್ರೀಲಂಕಾ ಸದ್ಯ(55.56) ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌(54.55) ನಾಲ್ಕನೇ ಸ್ಥಾನದಲ್ಲಿದೆ.

ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಭಾರತ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆಲ್ಲುತ್ತಿದ್ದರೆ ಈಗಾಗಲೇ ಮೊದಲ ತಂಡವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿರಬಹುದಿತ್ತು. ಫೈನಲ್ ಪಂದ್ಯವು ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್‌ 16 ಮೀಸಲು ದಿನವಾಗಿದೆ.