ಚೆನ್ನೈ : ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಬಾಂಗ್ಲಾದೇಶ(Iindia vs Bangladesh) ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಸ್ವದೇಶದಲ್ಲಿ ಆಡಿರುವ ತನ್ನ ಮೊದಲ 10 ಇನಿಂಗ್ಸ್‌ಗಳಿಂದ 750ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಜೈಸ್ವಾಲ್‌ಗೂ ಮುನ್ನ ಈ ವಿಶ್ವ ದಾಖಲೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಜಾರ್ಜ್ ಹೆಡ್ಲಿ ಹೆಸರಲ್ಲಿತ್ತು. ಹೆಡ್ಲಿ 1935ರಲ್ಲಿ 747 ರನ್ ಗಳಿಸಿದ್ದರು. ಇದೀಗ 89 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿದೆ. ಜೈಸ್ವಾಲ್ ಬಾಂಗ್ಲಾ ವಿರುದ್ಧ 118 ಎಸೆತ ಎದುರಿಸಿ 56 ರನ್ ಬಾರಿಸಿ ನಹಿದ್ ರಾಣಾಗೆ ವಿಕೆಟ್ ಒಪ್ಪಿಸಿದರು.
ದಾಖಲೆ ವೀರರು
755 ರನ್- ಯಶಸ್ವಿ ಜೈಸ್ವಾಲ್(ಭಾರತ)
747 ರನ್-ಜಾರ್ಜ್ ಹೆಡ್ಲಿ(ವೆಸ್ಟ್‌ಇಂಡೀಸ್)
743 ರನ್-ಜಾವೇದ್ ಮಿಯಾಂದಾದ್(ಪಾಕಿಸ್ತಾನ)
687 ರನ್-ಡೇವ್ ಹೌಟನ್(ಜಿಂಬಾಬ್ವೆ)
680 ರನ್-ಸರ್ ವಿವಿ ರಿಚರ್ಡ್ಸ್(ವೆಸ್ಟ್ ಇಂಡೀಸ್)
ಇದನ್ನೂ ಓದಿ IND vs BAN: ದಿಗ್ಗಜರ ಜತೆ ಎಲೈಟ್ ಪಟ್ಟಿ ಸೇರಲು ಬುಮ್ರಾ ಸಜ್ಜು; 3 ವಿಕೆಟ್ ಅಗತ್ಯ
ಉತ್ತಮ ಸ್ಥಿತಿಯಲ್ಲಿ ಭಾರತ
ಮೊದಲ ದಿನದಾಟದ ಅಂತ್ಯಕ್ಕೆ ಭಾರತವು 6 ವಿಕೆಟ್ ನಷ್ಟಕ್ಕೆ 339 ರನ್ ಪೇರಿಸಿದೆ. ಇಂದು ದ್ವಿತೀಯ ದಿನದಾಟ ಆರಂಭಿಸಲಿದೆ. ಶತಕವೀರ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒಂದು ಹಂತದಲ್ಲಿ 144 ರನ್ ಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾದದ್ದು ಈ ಉಭಯ ಆಟಗಾರರು. ಬಿರುಸಿನ ಬ್ಯಾಟಿಂಗ್ ಮೂಲಕ ಏಳನೇ ವಿಕೆಟ್‌ಗೆ 195 ರನ್ ಜತೆಯಾಟವಾಡಿದರು. ಅಶ್ವಿನ್ ಶತಕ ಬಾರಿಸಿ ಮಿಂಚಿದರೆ, ಜಡೇಜಾ ಅರ್ಧಶತಕ ಬಾರಿಸಿದರು.
ಭಾರತ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿದರೆ, ಶುಭಮನ್ ಗಿಲ್ 0, ವಿರಾಟ್ ಕೊಹ್ಲಿ 6 ರನ್ ಮಾಡಿ ಪೆವಿಲಿಯನ್ ಸೇರಿದರು. ಕೆ.ಎಲ್ ರಾಹುಲ್ 17 ರನ್ ಬಾರಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡರು.