Wednesday, 8th January 2025

Chahal-Dhanashree: ಚಹಲ್‌-ಧನಶ್ರೀ ವಿಚ್ಛೇದನ?

ಮುಂಬಯಿ: ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿರುವ ಟೀಮ್‌ ಇಂಡಿಯಾದ ಕ್ರಿಕೆಟರ್‌ ಯಜುವೇಂದ್ರ ಚಹಲ್‌(Yuzvendra Chahal) ಹಾಗೂ ನಟಿ, ಡ್ಯಾನ್ಸರ್‌ ಧನಶ್ರೀ ವರ್ಮಾ(Chahal-Dhanashree) ದಾಂಪತ್ಯದಲ್ಲಿನ ಬಿರುಕು ಇದೀಗ ಪರಸ್ಪರ ವಿಚ್ಚೇದನಕ್ಕೆ ಬಂದು ನಿಂತಿದೆ ಎಂದು ವರದಿಯಾಗಿದೆ. ಶೀಘ್ರವೇ ಈ ಜೋಡಿ ವಿಚ್ಚೇದನ ಪಡೆಯಲಿದ್ದಾರೆ ಎಂದು ಕೆಲ ಮಾಧ್ಯಗಳಲ್ಲಿ ವರದಿಯಾಗಿದೆ. ಈ ನಡುವೆ ಕೆಲ ದಿನಗಳಿಂದ ಚಹಲ್‌ ಸಾಮಾಜಿಕ ಜಾಲತಾಣದಲ್ಲಿ ಕೆಲ ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇವರಿಬ್ಬರು 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಇತ್ತೀಚೆಗೆ ಧನಶ್ರೀ ವರ್ಮಾ(Dhanashree Verma) ಕೆಲ ಮಾದಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಎಲ್ಲೆಡೆ ವೈರಲ್‌ ಜತೆಗೆ ಟ್ರೋಲ್‌ ಕೂಡ ಆಗಿತ್ತು. ಇದಕ್ಕೆ ಧನಶ್ರೀ ತಕ್ಕ ಉತ್ತರ ಕೂಡ ನೀಡಿದ್ದರು. “ನನ್ನ ಜೀವನದಲ್ಲಿ ನಾನು ಎಂದಿಗೂ ಟ್ರೋಲ್​ಗಳು ಹಾಗೂ ಮೀಮ್​ಗಳಿಗೆ ಹೆದರಿಲ್ಲ. ಇತ್ತೀಚಿನ ಟ್ರೋಲ್ ನಡೆಯುವರೆಗೂ ಅದನ್ನು ನಿರ್ಲಕ್ಷಿಸಿದ್ದೆ. ಈ ಬಾರಿ ಮಾಡಿರುವ ಟ್ರೋಲ್​ ಸರಿಯಾದ ಉದ್ದೇಶ ಹೊಂದಿಲ್ಲ. ಕಾರಣವೆಂದರೆ ಅದು ನನ್ನ ಕುಟುಂಬ ಮತ್ತು ನನ್ನ ಹತ್ತಿರದ ಮತ್ತು ಪ್ರೀತಿಪಾತ್ರರ ಮೇಲೆ ಪರಿಣಾಮ ಬೀರಿದೆ. ನಿಮ್ಮೆಲ್ಲರಿಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾತನಾಡುವ ಸ್ವಾತಂತ್ರ್ಯವಿದೆ. ಅದರೆ ನೀವು ನಮ್ಮ ಕುಟುಂಬಗಳ ಭಾವನೆಗಳನ್ನು ಮರೆತುಬಿಡುತ್ತೀರಿ ಹಾಗೂ ನಿರ್ಲಕ್ಷಿಸುತ್ತೀರಿ. ಇದು ನಾನು ಸಾಮಾಜಿಕ ಮಾಧ್ಯಮದಿಂದ ಹೊರಕ್ಕೆ ಹೋಗಬೇಕು ಎಂಬ ಭಾವನೆಗೆ ಕಾರಣವಾಗಿದೆ ಎಂದು ಧನಶ್ರೀ ಹೇಳಿದ್ದರು.

‘ನಾವೆಲ್ಲವೂ ಸಾಮಾಜಿಕ ಮಾಧ್ಯಮವನ್ನು ತುಂಬಾ ನಕಾರಾತ್ಮಕವಾಗಿಸಿದ್ದೇವೆ. ದೊಡ್ಡ ಪ್ರಮಾಣದಲ್ಲಿ ದ್ವೇಷ ಮತ್ತು ಅಸಂಗತತೆಯನ್ನು ಹರಡುತ್ತಿದ್ದೇವೆ ಎಂಬುದು ನನಗೆ ಮನವರಿಕೆಯಾಗಿದೆ. ಸಾಮಾಜಿಕ ಮಾಧ್ಯಮವು ನನ್ನ ವೃತ್ತಿಯ ಪ್ರಮುಖ ಭಾಗವಾಗಿದೆ ಮತ್ತು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ, ಅದಕ್ಕಾಗಿಯೇ ನಾನು ಇಂದು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ನೀವು ಹೆಚ್ಚು ಸಂವೇದನಾಶೀಲರಾಗಬೇಕು ಮತ್ತು ನಮ್ಮ ಪ್ರತಿಭೆ ಮತ್ತು ಕೌಶಲವನ್ನು ಗಮನ ಹರಿಸಬೇಕು ಎಂದು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ ದಿನದ ಕೊನೆಯಲ್ಲಿ ನಾವೆಲ್ಲರೂ ನಿಮ್ಮನ್ನು ರಂಜಿಸಲು ಈ ವೇದಿಕೆಯಲ್ಲಿ ಇರುತ್ತೇವೆ. ನಾನು ಕೂಡ ನಿಮ್ಮ ತಾಯಿ, ನಿಮ್ಮ ಸಹೋದರಿ, ನಿಮ್ಮ ಸ್ನೇಹಿತ, ನಿಮ್ಮ ಹೆಂಡತಿಯಂತೆ ಕೇವಲ ಮಹಿಳೆ ಎಂಬುದನ್ನು ಮರೆಯಬೇಡಿ. ಅನಗತ್ಯ ಟ್ರೋಲ್​ ಇದು ನ್ಯಾಯೋಚಿತ ಅಲ್ಲ’ ಎಂದು ಹೇಳಿಕೊಂಡಿದ್ದರು.