ಹಾಸನ,
ಬಯಲು ಸೀಮೆಯ ಜಿಲ್ಲೆಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಮುಂದಿನ ವರ್ಷದ ಏಪ್ರಿಲ್ ತಿಂಗಳ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕೆಲಸ ನಿಧಾನವಾಗಿದೆ ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ಕಾಮಗಾರಿಯು ಸ್ವಲ್ಪ ವಿಳಂಬವಾಗಿದೆ. ಆದರೆ ಆದಷ್ಟು ತುರ್ತಾಗಿ ಇದನ್ನು ಮುಕ್ತಾಯಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಎತ್ತಿನಹೊಳೆ ಯೋಜನೆಗಾಗಿ ಬೇಕಾಗಿರುವ ಬಾಕಿ 3.6 ಹೆಕ್ಟೇರ್ ಭೂಮಿಯನ್ನು ಶೀಘ್ರವಾಗಿ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದು ಕೆ. ಗೋಪಾಲಯ್ಯ ಅವರು ತಿಳಿಸಿದರು.
ಸಕಲೇಶಪುರ ಭಾಗದಲ್ಲಿ ವರ್ಷಕ್ಕೆ ಮೂರು ತಿಂಗಳು ಹೆಚ್ಚಾಗಿ ಮಳೆಯಾಗುವ ಕಾರಣ 24 ಟಿ.ಎಂ.ಸಿ ನೀರು ದೊರೆಯುತ್ತದೆ. ಇದನ್ನು ಚೆಕ್ ಡ್ಯಾಮ್ಗಳ ಮೂಲಕ ತಡೆದು ಮೇಲೆತ್ತಿ ಗುರುತ್ವಾಕರ್ಷಣಾ ಶಕ್ತಿ ಮೂಲಕ ಬಯಲು ಸೀಮೆ ಪ್ರದೇಶಗಳಿಗೆ ನೀರು ಹರಿಸಲಾಗುತ್ತದೆ ಎಂದರು.
ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟಿರುವ ಪ್ರದೇಶಗಳು ಹಾಗೂ ಸಕಲೇಶಪುರ ತಾಲ್ಲೂಕಿನ ರಸ್ತೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. ಈ ಯೋಜನೆಯು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು, ಹಾಸನ ಜಿಲ್ಲೆಯ ಅರಸೀಕೆರೆ, ಬೇಲೂರು ಹಾಗೂ ಮತ್ತಿತರ ಜಿಲ್ಲೆ ಮತ್ತು ತಾಲ್ಲೂಕುಗಳ ಜನರಿಗೆ ಉಪಯೋಗವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಅರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಉಪ ವಿಭಾಗಾಧಿಕಾರಿ ಗಿರಿಶ್ ನಂದನ್, ಎತ್ತಿನ ಹೊಳೆ ಹೋಜನೆ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ, ತಹಶಿಲ್ದಾರ್ ಮಂಜುನಾಥ್, ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್ ಮತ್ತಿತರರು ಹಾಜರಿದ್ದರು.