ಹಾಸನ:
ಕೊರೊನಾ ಸಂಕಷ್ಟದ ನಡುವೆ ಎಪಿಎಂಸಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಅಗತ್ಯವೇನಿತ್ತು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಕೋವಿಡ್-19, ಎಪಿಎಂಸಿಯ ಕಾಯಿದೆ ತಿದ್ದುಪಡಿ ಕುರಿತು ಮುಂಜಾಗೃತ ಕ್ರಮಗಳ ಬಗ್ಗೆಯ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್‍ನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರೂ ಒಟ್ಟಾಗಿ ದೇಶದಿಂದಲೇ ಕೊರೊನಾವನ್ನು ಓಡಿಸೋಣ ಎಂದು ಧೈರ್ಯ ತಂಬಬೇಕಾದ ಸರಕಾರಗಳು ಗಾಬರಿಗೊಳ್ಳುವ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡುತ್ತಿದ್ದಾರೆ. ಯಾವುದೇ ಕಾನೂನು ಜಾರಿಗೆ ತಂದರೂ ಅದು ರೈತರ ಪರವಾಗಿಬೇಕೆ ಹೊರತು ರೈತರ ವಿರುದ್ಧವಿರಬಾರದು ಇಂಥ ಕಾಯಿದೆಗಳಿಗೆ ರೈತರು ಹೆದರದೆ ರೈತರು ಸಂಘಟಿತರಾಗಿ ಸಮಸ್ಯೆ ಎದುರಿಸಲು ಸಜ್ಜಾಗಿರಬೇಕು ಎಂದು ಕರೆ ನೀಡಿದರು.
ದೇಶದ ಪ್ರಧಾನಿಗಳು ಮನ್‍ಕೀ ಬಾತ್ ನಲ್ಲಿ ರೈತರ ಕಷ್ಟದ ಬಗ್ಗೆ ಚಕಾರ ಎತ್ತಿಲ್ಲ. ಕೇವಲ ಪಾಕಿಸ್ತಾನ, ಚೀನಾ ಹಾಗೂ ಕೊರೊನಾ ಬಗ್ಗೆ ಮಾತನಾಡುವುದನ್ನು ಬಿಟ್ಟು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು ಪಾಷ, ಬೈರೇಗೌಡ, ಮೀಸೆ ಮಂಜಣ್ಣ ಇತರರು ಇದ್ದರು.