ಬೆಂಗಳೂರು
ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಇಂದು ಸರಳವಾಗಿ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಸರಳವಾಗಿ ಆಚರಿಸುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಈದ್ಗಾ ಮತ್ತು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಿರುವುದರಿಂದ ಮುಸ್ಲಿಮರು ಮನೆಗಳಲ್ಲೇ ನಮಾಜ್ ನಿರ್ವಹಿಸಿ ಹಬ್ಬ ಆಚರಿಸುತ್ತಿದ್ದಾರೆ. ಈದ್ ಸಂದರ್ಭದಲ್ಲಿ ಸಾವಿರಾರು ಜನರು ಸೇರುತ್ತಿದ್ದ ಖುದ್ದೂಸ್ ಸಾಹೆಬ್ ಈದ್ಗಾ ಮೈದಾನ, ಚಾಮರಾಜಪೇಟೆ ಈದ್ಗಾ ಮೈದಾನ, ಬನ್ನೇರುಘಟ್ಟ ಮಸೀದಿಯಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಮುಸ್ಲಿಂ ಯುವಕರು ಸ್ನೇಹಿತರು ಮತ್ತು ಕುಟುಂಬಸ್ಥರ ಮನೆಗಳಿಗೆ ದ್ವಿಚಕ್ರ ವಾಹನಗಳಲ್ಲಿ ತೆರಳಿ ಶುಭ ಕೋರುತ್ತಿದ್ದ ದೃಶ್ಯ ಕಂಡುಬಂತು. ರಂಜಾನ್ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಪ್ರತೀ ಏರಿಯಾಗಳಲ್ಲೂ ಭದ್ರತೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದು, ವಿಶೇಷವಾಗಿ ಕೊರೋನಾ ಹಾಟ್ ಸ್ಪಾಟ್ ಗಳಾದ ಪಾದರಾಯನಪುರ, ಟಿಪ್ಪು ನಗರ, ಚಾಮರಾಜಪೇಟೆ, ಶಿವಾಜಿನಗರ, ಹೊಂಗಸಂದ್ರದಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರತಿ ಮಸೀದಿಗಳ ಬಳಿಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಕೇರಳದಲ್ಲಿ ನಿನ್ನೆ ರಂಜಾನ್ ಹಬ್ಬವನ್ನು ಆಚರಿಸಲಾಗಿತ್ತು.