ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ವಿಷವ್ಯೂಹವಾಗಿ ಪರಿಣಮಿಸಿದೆ. ಶನಿವಾರ ಒಂದೇ ದಿನ 918 ಮಂದಿಗೆ ಸೋಂಕು ತಗುಲಿದ್ದು, ಕರಾಳ ದಿನವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ 596 ಕರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 11 ಮಂದಿ ಬಲಿ ಪಡೆಯುವ ಮೂಲಕ ಸಾವಿನ ಕೂಪವಾಗಿದೆ.
ದಿನೇ ದಿನೇ ಏರುತ್ತಿರುವ ಕರೋನಾ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಹರಸಾಹಸ ಪಡುತ್ತಿದೆ. ದಿನಕ್ಕೊಂದು ನಿರ್ಧಾರ ತಳೆದು ಗೊಂದಲ ಸೃಷ್ಟಿಸುತ್ತಿರುವ ಸರಕಾರ ಪ್ರತಿ ಭಾನುವಾರ ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದೆ.
ಕಳೆದ 24 ಗಂಟೆಗಳಲ್ಲಿ 918 ಹೊಸ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 11,923 ತಲುಪಿದೆ. ಇಂದು 371 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಒಟ್ಟು 7,287 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಕರೋನಾ ಸೋಂಕು ರಾಜ್ಯದಲ್ಲಿ 11 ಮಂದಿಯನ್ನು ಬಲಿ ಪಡೆದಿದ್ದು ಒಟ್ಟು ಮರಣ ಪ್ರಮಾಣ 191 ತಲುಪಿದೆ. 4441 ಸಕ್ರಿಯ ಪ್ರಕರಣಗಳಿರುವ ರಾಜ್ಯದಲ್ಲಿ 197 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಭಾರತದಲ್ಲಿ 18,552 ಹೊಸ ಕರೋನಾ ಸೋಂಕಿತರು ಪತ್ತೆಯಾಗಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಸದ್ಯ 1,97,387 ಸಕ್ರಿಯ ಪ್ರಕರಣಗಳಿರುವ ಭಾರತದಲ್ಲಿ 2,95,881 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದುವರೆಗೂ ಕರೋನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 15,685 ತಲುಪಿದೆ.
ಶನಿವಾರ ಕರೋನಾ ಹೆಚ್ಚು ದಾಖಲಾದ ಜಿಲ್ಲೆಗಳು
ಬೆಂಗಳೂರು 596
ದಕ್ಷಿಣ ಕನ್ನಡ 49
ಕಲಬುರಗಿ 33
ಬಳ್ಳಾರಿ 24
ಗದಗ 24
ಧಾರವಾಡ 19
ಬೀದರ್ 17
ಉಡುಪಿ 14
ಹಾಸನ 14
ಕೋಲಾರ 14
ಸಾವಿನ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳು
ಜಿಲ್ಲೆ ಸೋಂಕಿತರು ಮರಣ
ಬೆಂಗಳೂರು 2531 84
ಕಲಬುರಗಿ 1364 17
ಉಡುಪಿ 1139 2
ಯಾದಗಿರಿ 929 1
ಬೀದರ್ 555 19
ದಕ್ಷಿಣ ಕನ್ನಡ 568 8
ಬಳ್ಳಾರಿ 626 10
ಮಂಡ್ಯ 400 0
ರಾಯಚೂರು 463 2
ಬೆಳಗಾವಿ 318 1
ಬೆಂಗಳೂರಿಗೆ ಕಾದಿದೆ ಕರೋನಾಘಾತ
ಬೆಂಗಳೂರಿನಲ್ಲಿ ನಿತ್ಯ ಕರೋನಾ ಸೋಂಕಿತರ ಸಂಖ್ಯೆ ಅಂಕೆಗೆ ಬರುತ್ತಿಲ್ಲ . ಒಂದೇ ದಿನ 596 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ . ಇದರಿಂದ ಜನತೆಯಲ್ಲಿ ಆತಂಕದ ಮನೆ ಮಾಡಿದೆ. ಲಾಕ್ ಡೌನ್ ಬಿಡುಗಡೆ ಮಾಡಿದ್ದರಿಂದ ಜನರ ನಿಯಂತ್ರಣಕ್ಕೆ ಸಾಧ್ಯವಾಗದ ಕಾರಣದಿಂದ ಕರೋನಾ ವ್ಯಾಪಕಗೊಂಡಿದೆ. ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನ ವ್ಯಾಪ್ತಿ ವಿಸ್ತಾರಗೊಂಡಿದೆ. ಹೀಗೆ ಮುಂದುವರೆದರೆ ಸಿಲಿಕಾನ್ ಸಿಟಿ ಕರುಣಾ ಜನಕವಾಗುವುದು ಖಚಿತ.
ಆಸ್ಪತ್ರೆ ಫುಲ್, ಮೈದಾನವೇ ಆಲಯ!
ಕರೋನಾಗೆ ಮೀಸಲಿಟ್ಟಿದ್ದ ಸರಕಾರಿ ಆಸ್ಪತ್ರೆಗಳು ಕರೋನಾ ಸೋಂಕಿತರಿಂದ ಭರ್ತಿ ಯಾಗಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.