Tuesday, 26th November 2024

ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪಿದ ಖಾಸಗಿ ಆಸ್ಪತ್ರೆಗಳು

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕರೋನಾ‌ ಸೋಂಕಿತರಿಗೆ ಆಕ್ಸಿಜನ್ ಸೌಲಭ್ಯವಿರುವ ಶೇ. 50ರಷ್ಟು ಬೆಡ್‌ಗಳನ್ನು ನೀಡಲು ಒಪ್ಪಿವೆ ಎಂದು ಕೋವಿಡ್ ಸೋಂಕು ನಿಯಂತ್ರಿಸುವ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಕೋವಿಡ್19 ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಬಳಕೆ ಸಂಬಂಧ ಸಚಿವರು ಹಾಗೂ ಖಾಸಗಿ ಆಸ್ಪತ್ರೆಗಳ‌ ಸಂಘದ ಅಧ್ಯಕ್ಷ ರವೀಂದ್ರ ಸಮ್ಮುಖದಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರು ಮತ್ತು ತಜ್ಞ ವೈದ್ಯರ ಜತೆ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸದ್ಯಕ್ಕೆ 750 ಬೆಡ್ ಗಳನ್ನು ಖಾಸಗಿ ಆಸ್ಪತ್ರೆಗಳು ನೀಡಲಿವೆ ಒಂದು ವಾರದಲ್ಲಿ ಹಂತ ಹಂತವಾಗಿ 2 ಸಾವಿರ ಬೆಡ್‌ಗಳು ಲಭ್ಯವಾಗಲಿವೆ ಈ ಬೆಡ್‌ಗಳನ್ನು ಕೊರೊನಾ ರೋಗ ಲಕ್ಷಣ ಇರುವವರ ಚಿಕಿತ್ಸೆಗೆ ಮಾತ್ರ ಮೀಸಲಿಡಲಾಗುವುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರ ದಾಖಲಿಸುವ ಉಸ್ತುವಾರಿ ನೋಡಿಕೊಳ್ಳಲು ಒಂದು ಸಮಿತಿ ಇದ್ದು ಈ ಸಮಿತಿಯ ನೇತೃತ್ವವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ವಹಿಸಿಕೊಂಡಿದ್ದಾರೆ. ಇವರೊಂದಿಗೆ ಇಬ್ಬರು ಹಿರಿಯ ಅಧಿಕಾರಿಗಳು, ಇಬ್ಬರು ಖಾಸಗಿ ಆಸ್ಪತ್ರೆ ವೈದ್ಯರು ಈ ಸಮಿತಿಯಲ್ಲಿ ಇರಲಿದ್ದಾರೆ ಎಂದು ವಿವರಿಸಿದರು.
ಸರಕಾರಿ ಆಸ್ಪತ್ರೆಗಳಂತೆ ಖಾಸಗಿಯಲ್ಲೂ ಬೆಡ್‌ಗಳಿಗೆ ಸಂಖ್ಯೆ ನೀಡಲಾಗುತ್ತದೆ ಸಂಘದಲ್ಲಿ ನೋಂದಾಯಿಸಿದ ಖಾಸಗಿ ಆಸ್ಪತ್ರೆಗಳಲ್ಲದೆ ಬೆಂಗಳೂರಿನ ಇನ್ನಷ್ಟು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮೆಡಿಕಲ್ ಕಾಲೇಜುಗಳ ಸಭೆ ಕರೆದು ಅಲ್ಲೂ ಶೇ. 50ರಷ್ಟು ಬೆಡ್‌ಗಳನ್ನು ಮೀಸಲಿರಿಸಲು ಕೋರಲಾಗುವುದು. ಕರೋನಾ ಚಿಕಿತ್ಸೆಗೆ ಸರ್ಕಾರದ ಜತೆ ಎಲ್ಲ ರೀತಿಯಲ್ಲೂ ಸಹ ಸಹಕಾರ ನೀಡುವುದಾಗಿ ರವೀಂದ್ರ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಕೊರೊನಾ ವಾರಿಯರ್ಸ್ ಗಳಿಗೆ ಸರಕಾರ ವಿಮೆ ಸೇರಿದಂತೆ ಇತರ ರಕ್ಷಣೆ ನೀಡಲಿದೆ. ದರ ನಿಗದಿ ಬಗ್ಗೆ ಸರ್ಕಾರದ ಜತೆ ಸಮಾಲೋಚಿಸಲಾಗಿದೆ ಯಾವುದೇ ಗೋ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಖಾಸಗಿ ಆಸ್ಪತ್ರೆಗೆ ಬರುವ ಕರೋನಾ ಹೊರತಾದ ರೋಗಿಗಳು ಯಾವುದೇ ಭಯ ಪಡಬೇಕಾಗಿಲ್ಲ ಇತರರಿಗೆ ಸೋಂಕು ಹರಡದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.