Saturday, 11th January 2025

ಕೇಂದ್ರ- ರಾಜ್ಯದ ಪ್ಯಾಕೇಜ್ ಗೆ ಜನಮೆಚ್ಚುಗೆ: ಸದಾನಂದಗೌಡ

ಬೆಂಗಳೂರು

ಕರೊನಾ ನಿರ್ವಹಿಸುವ ವಿಚಾರದಲ್ಲಿ ಕೇಂದ್ರ ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ ಮೇಲಾಗಿ ಕೇಂದ್ರ ಮತ್ತು ಯಡಿಯೂರಪ್ಪ ಸರ್ಕಾರ ಜನಮೆಚ್ಚುವ ಪ್ಯಾಕೇಜ್ ನೀಡಿವೆ ಎಂದು ಕೇಂದ್ರ ರಾಸಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದಗೌಡ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಅವರು, ದೇಶದ ಅಳಿವು ಉಳಿವು ಬಂದಾಗ ದೇಶಕ್ಕೋಸ್ಕರ ಕೆಲಸ ಮಾಡಬೇಕಾದುದ್ದು ಮೊದಲ ಆಯ್ಕೆಯಾಗಲಿದೆ. ಈ ವಿಚಾರದಲ್ಲಿ ವಿಪಕ್ಷಗಳ ಟೀಕೆಗೆ ಸರಿಯಲ್ಲ, ಶೋಭೆಯೂ ಅಲ್ಲ ಎಂದು ತಿರುಗೇಟು ನೀಡಿದರು.

ಆದರೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ವಿಪಕ್ಷಗಳು ಮಾಡಬಾರದು. ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂ ಜೊತೆ ಮಾತುಕತೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಏಕಪಕ್ಷೀಯವಾಗಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಪಶ್ಚಿಮ ಬಂಗಾಳ, ಕೇರಳ, ಪಂಜಾಬ್ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ.ಕೇಂದ್ರ ಸರ್ಕಾರ ಜನಮೆಚ್ಚುವ ಪ್ಯಾಕೇಜ್ ನೀಡಿದೆ ಎಂದರು.

ಯಡಿಯೂರಪ್ಪ ಕೂಡಾ ಎಲ್ಲರನ್ನು ಮುಟ್ಟುವ, ತಲುಪುವ ಪ್ಯಾಕೇಜ್ ಕೊಟ್ಟಿದ್ದಾರೆ. ವಿಪಕ್ಷಗಳು ಸಲಹೆ ಕೊಡಲಿ ಅದನ್ನು ಬಿಟ್ಟು ಕೇವಲ ಟೀಕೆಗೋಸ್ಕರ ಆರೋಪ ಮಾಡುವುದುಬೇಡ ಎಂದು ಹೇಳಿದರು. ಕರೋನಾ ಜೊತೆ ಜೀವನ ನಡೆಸುವ ಅನಿವಾರ್ಯತೆ ಬಂದಿದೆ.ಕೇಂದ್ರ ಸರ್ಕಾರ ಕರೋನಾ ನಿಯಂತ್ರಿಸಲು ಸಮರ್ಪಕವಾಗಿ ಕೆಲಸ ಮಾಡುತ್ತಿದೆ .ಆರಂಭದ ಅಡೆತಡೆಗಳನ್ನು ದಾಟಿದ್ದೇವೆ. ರಕ್ಷಣಾ ಇಲಾಖೆಯಿಂದ ಹಿಡಿದು ವೈರಸ್ ತಡೆಗಟ್ಟಲು ಸಮರ್ಪಕವಾಗಿ ಕೆಲಸ ಮಾಡಲಾಗಿದೆ. ಜಗತ್ತಿನಲ್ಲೇ ಕರೋನಾಗೆ ತಡೆಗೆ ಮಾತ್ರೆಗಳನ್ನು ಪೂರೈಸುವಲ್ಲಿ ನಾವು ಮೊದಲಿಗರಾಗಿದ್ದೇವೆ ಎಂದರು.

ಇನ್ನು ಸ್ವಲ್ಪ ದಿನ ಇದರ ತೀವ್ರತೆ ಇರುತ್ತದೆ.ಇದಕ್ಕೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಸರ್ಕಾರ ತೆಗೆದುಕೊಂಡಿದೆ. ಯಾರು ಆತಂಕ ಪಡುವುದು ಬೇಡ ನಾನು ಕೂಡಾ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಂಡಿದ್ದೇನೆ ನಮ್ಮ ಮನೆಯ ಸಿಬ್ಬಂದಿಗೂ ಮೂರು ದಿನಗಳಿಗೊಮ್ಮೆ ತಪಾಸಣೆ ಮಾಡಲಾಗುತ್ತಿದೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ನಾನು ತೆಗೆದುಕೊಂಡಿದ್ದೇನೆ ಎಂದರು.

ಸಮುದಾಯಕ್ಕೆ ಹರಡಂತೆ ತಡೆಯಲು ಕ್ವಾರಂಟೇನ್ ಮಾಡೋದು ಅನಿವಾರ್ಯ. ಮುಂಜಾಗ್ರತಾ ಕ್ರಮಕ್ಕಾಗಿ ಕ್ವಾರಂಟೇನ್ ಮಾಡಲಾಗ್ತಿದೆ ನಾವೊಬ್ಬರೇ ಕ್ವಾರಂಟೇನ್ ಮಾಡುತ್ತಿಲ್ಲ ಬದಲಾಗಿ ಎಲ್ಲಾ ದೇಶದಲ್ಲೂ ಕ್ವಾರಂಟೇನ್ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂಜೆ ವಿಕಾಸ ಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಸಚಿವರಾದ ಸುಧಾಕರ್, ಅಶ್ವಥ್ ನಾರಾಯಣ್ ಹಾಗೂ ಶ್ರೀರಾಮುಲು ಅವರ ಜೊತೆ ಫಾರ್ಮೋ ಕ್ಷೇತ್ರದ ಕುರಿತು ಮಾತುಕತೆ ಮಾಡಲಿರುವುದಾಗಿ ಹೇಳಿದರು. ರಾಜ್ಯದಲ್ಲಿ ಔಷಧಿ ಲಭ್ಯತೆ, ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಾಗಿ ಸಚಿವರು ಹೇಳಿದರು.

Leave a Reply

Your email address will not be published. Required fields are marked *