Monday, 25th November 2024

 ಕೋವಿಡ್​​ಗೆ ಮೊದಲ ಪೊಲೀಸ್​​​ ಸಾವು – ಆತಂಕದಲ್ಲಿ ಖಾಕಿ ಪಡೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ಮಾಹಾಮಾರಿ ಕರೋನಾ ಸೋಂಕಿಗೆ ಬೆಂಗಳೂರಿನಲ್ಲಿ ಮೊದಲ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ನಗರದ ವಿವಿ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 59 ವರ್ಷ ವಯಸ್ಸಿನ ಎಎಸ್ಐ ಮೃತ ದುರ್ದೈವಿ.
ಕಳೆದ ಕೆಲ ವರ್ಷಗಳಿಂದ ವಿವಿ ಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಎಎಸ್ಐಗೆ ಶುಗರ್ ಲೆವೆಲ್ ಜಾಸ್ತಿ ಇದ್ದರಿಂದ ಕಳೆದ ನಾಲ್ಕು ದಿನಗಳಿಂದ ರಜೆ ಪಡೆದು ಮನೆಯಲ್ಲಿದ್ದರು. ಇದೇ 13ರಂದು ಮನೆಯಲ್ಲಿ ದಿಢೀರ್ ಕುಸಿದು ಬಿದ್ದು ಎಎಸ್ಐ ಸಾವನ್ನಪ್ಪಿದ್ದಾರೆ.
ವೈದ್ಯರು ಮೃತ ಎಎಸ್ಐಗೆ ಕೊವೀಡ್ ಟೆಸ್ಟ್ ಮಾಡಿದ್ದು, ನಿನ್ನೆ ಬಂದ ರಿಪೋರ್ಟ್​ನಲ್ಲಿ ಪಾಸಿಟಿವ್ ಧೃಡಪಟ್ಟಿದೆ. ಇನ್ನೂ ಇದೇ ವೇಳೆ ವಿವಿ ಪುರದ ಟ್ರಾಫಿಕ್ ಠಾಣೆಯ ಮತ್ತೊಬ್ಬ ಎಎಸ್ಐಗೂ ಸಹ ಪಾಸಿಟಿವ್ ವರದಿಯಾಗಿದೆ. ನೆಗಡಿ, ಶೀತ, ಕೆಮ್ಮು ಇದ್ದರಿಂದ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ‌ಮತ್ತೊಬ್ಬ ಎಎಸ್ಐಗೆ ಕೊರೋನಾ ಪಾಸಿಟಿವ್ ಇರುವುದು ದೃಡಪಟ್ಟಿದ್ದು, ನಿಗಧಿತ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಇಬ್ಬರು ಎಎಸ್ಐಗಳ ಜತೆ ಹಲವು ಸಿಬ್ಬಂದಿ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
59 ವರ್ಷ ವಯಸ್ಸಿನ ಇಬ್ಬರು ಎಎಸ್ಐಗಳು ನಿವೃತ್ತಿ ಅಂಚಿನಲ್ಲಿದ್ದರು. ಅದರಲ್ಲೂ ಮೃತ ಎಎಸ್ಐ ಇದೇ ತಿಂಗಳ 30 ರಂದು ನಿವೃತ್ತಿಯಾಗಬೇಕಿತ್ತು. ನಿವೃತ್ತಿಗೆ 15 ದಿನಗಳಷ್ಟೇ ಬಾಕಿ ಇರುವಾಗ ಮಾಹಾಮಾರಿ ಕರೋನಾ ಗೆ ಸೋಂಕಿನಿಂದ ಮೃತಪಟ್ಟಿರೋದು ದುರ್ದೈವವೇ ಸರಿ. ಈಗಾಗಲೇ ವಿವಿ ಪುರ ಟ್ರಾಫಿಕ್ ಠಾಣೆಯ ಎಲ್ಲ ಸಿಬ್ಬಂದಿಗೆ ಜಯನಗರ ಸರಕಾರ ಅಸ್ಪತ್ರೆಯಲ್ಲಿ ಕೊವೀಡ್ ಟೆಸ್ಟ್ ಮಾಡಿಸಲಾಗುತ್ತಿದೆ.
ಒಂದೇ ಠಾಣೆಯಲ್ಲಿ ಎರಡು ಪಾಸಿಟಿವ್ ವರದಿಯಾಗಿದ್ದು, ಇತರ ಸಿಬ್ಬಂದಿಯ ನಿದ್ದೆ ಕೆಡಿಸಿದೆ. ಇನ್ನು, ವಿವಿ ಪುರ ಠಾಣೆಯಲ್ಲಿ ಒಂದು ಸಾವು ಇನ್ನೊಂದು ಪಾಸಿಟಿವ್ ರಿಪೋರ್ಟ್ ಬಂದಿದ್ದರಿಂದ ಬಿಬಿಎಂಪಿ ಆಧಿಕಾರಿಗಳು ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಿ, ಠಾಣೆಯನ್ನ ರಾಸಾಯನಿಕದಿಂದ ಸ್ಯಾನಿಟೈಸ್ ಮಾಡಿದ್ದಾರೆ.
ಇನ್ನು, ನಗರದಲ್ಲಿ ಇದುವರೆಗೆ 13 ಪೊಲೀಸರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಪೊಲೀಸರಲ್ಲಿ ಮತ್ತಷ್ಟು ಆತಂಕವನ್ನ ಸೃಷ್ಟಿಸಿದೆ. ಕಂಟೈನ್ಮೆಂಟ್ ಜೋನ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಸಾರ್ವಜನಿಕರ ಜತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ ಖಾಕಿಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಜತೆಗೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿದಾಗ ಅವರಲ್ಲಿಯೂ ಸಹ ಪಾಸಿಟಿವ್ ವರದಿಯಾಗ್ತಿರೋದು ಖಾಕಿ ನಿದ್ದೆ ಕೆಡಿಸಿದೆ. ಈಗಾಗಲೇ ಹಿರಿಯ ಆಧಿಕಾರಿಗಳು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದಾರೆ.