Monday, 28th October 2024

ಖೇಲ್ ರತ್ನಗೆ ರಾಣಿ ಹೆಸರು ಶಿಫಾರಸು ಮಾಡಿದ ಹಾಕಿ ಇಂಡಿಯಾ

ದೆಹಲಿ,
ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಷ್ಟ್ರೀಯ ಮಹಿಳಾ ತಂಡದ ನಾಯಕಿ ರಾಣಿ ಹೆಸರನ್ನು ಹಾಕಿ ಇಂಡಿಯಾ ಮಂಗಳವಾರ ಶಿಫಾರಸು ಮಾಡಿದೆ. ಇದೇ ವೇಳೆ ವಂದನಾ ಕಟಾರಿಯಾ, ಮೋನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರನ್ನು ಪ್ರಸಕ್ತ ಸಾಲಿನ ಅರ್ಜುನ  ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಜೀವಮಾನ ಸಾಧನೆಗಾಗಿ ನೀಡಲಾಗುವ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿಗೆ ಭಾರತದ ಮಾಜಿ ಸ್ಟಾರ್ ಆರ್.ಪಿ ಸಿಂಗ್ ಮತ್ತು ತುಷಾರ್ ಖಂಡ್ಕರ್ ಅವರನ್ನು ಫೆಡರೇಷನ್ ಶಿಫಾರಸು ಮಾಡಿದರೆ, ಇದೇ ವೇಳೆ ಕೋಚ್ ಗಳಾದ ಬಿ.ಜೆ. ಕರಿಯಪ್ಪ ಮತ್ತು ರೋಮೇಶ್ ಪಠಾನಿಯಾ ಅವರನ್ನು ದ್ರೋಣಾಚಾರ್ಯ ಗೌವರಕ್ಕೆ ನಾಮನಿರ್ದೇಶಿಸಲಾಗಿದೆ.
ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಶಿಫಾರಸಿಗೆ 2016 ರ ಜನವರಿ 1ರಿಂದ 2019 ರ ಡಿಸೆಂಬರ್ 31 ರವರೆಗಿನ ಕ್ರೀಡಾ ಸಾಧನೆಯನ್ನು ಪರಿಗಣಿಸಲಾಗುತ್ತದೆ.
ಈ ಅವಧಿಯಲ್ಲಿ ರಾಣಿ ನೇತೃತ್ವದ ಭಾರತ ತಂಡವು 2017ರಲ್ಲಿ ನಡೆದ ಮಹಿಳಾ ಏಷ್ಯಾಕಪ್‌ನಲ್ಲಿಐತಿಹಾಸಿಕ ಗೆಲುವು ಸಾಧಿಸಿದ್ದಲ್ಲದೆ, 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಷ್ಟು ಮಾತ್ರವಲ್ಲದೆ  2019 ರಲ್ಲಿ ಎಫ್‌ಐಎಚ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಾಣಿ ನಿರ್ಣಾಯಕ ಪಾತ್ರ ವಹಿಸಿದ್ದರು. ಜತೆಗೆ ಇವರ ಅವಧಿಯಲ್ಲಿ ತಂಡವು ಎಫ್ ಐಎಚ್ ವಿಶ್ವ ರಾಂಕಿಂಗ್ ನಲ್ಲಿ ಶ್ರೇಷ್ಠ 9ನೇ ಸ್ಥಾನಕ್ಕೇರಿದ ಸಾಧನೆ ಮಾಡಿತ್ತು.
ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯೇ ಎನಿಸಿರುವ ರಾಣಿ, 2016ರಲ್ಲಿ ಅರ್ಜುನ ಮತ್ತು 2020ರಲ್ಲಿ ಪದ್ಮ ಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಸ್ಟ್ರೈಕರ್ ವಂದನಾ ಸುಮಾರು 200  ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದರೆ, ಮೋನಿಕಾ 150 ಪಂದ್ಯಗಳನ್ನಾಡಿದ್ದಾರೆ. ಭಾರತದ ಪುರುಷರ ತಂಡದ ಡ್ರ್ಯಾಗ್ ಫ್ಲಿಕ್ಕರ್ ತಜ್ಞ ಹರ್ಮನ್ ಪ್ರೀತ್ ಸಿಂಗ್ ಅರ್ಜುನ  ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿರುವ ಅಂತಿಮ ಪಟ್ಟಿಯಲ್ಲಿರುವ ಮತ್ತೊಬ್ಬರಾಗಿದ್ದಾರೆ.