Monday, 25th November 2024

ಗಾಲ್ವನ್ ಕಣಿವೆಯ ಘಟನೆ ಕಳವಳಕಾರಿ: ದೇವೇಗೌಡ

ಬೆಂಗಳೂರು:
ಲಡಾಖ್ ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದು ಹಲವು ಜೀವ ಬಲಿಗಳಾಗಿವೆ. ಚೀನಾ ಪದೇ ಪದೇ ತಂಟೆತನ ತೋರುತ್ತಲೇ ಬಂದಿದೆ. ಗಡಿಭಾಗದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
 ಗಾಲ್ವನ್ ಕಣಿವೆಯಲ್ಲಿನ ಪರಿಸ್ಥಿತಿ ಬಗ್ಗೆ ಬರುತ್ತಿರುವ ವರದಿಗಳು ಚಿಂತೆ ಮೂಡಿಸುವಂತಿವೆ ಎಂದು ಅವರು ಹೇಳಿದ್ಧಾರೆ.
 ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರ ಜೀವ ಯಾಕೆ ಹೋಗುವಂತಾಯಿತು? ರಾಷ್ಟ್ರದ ಹಿತಾಸಕ್ತಿಯಿಂದ ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳು ಚೀನಾದೊಂದಿಗೆ ಗಡಿ ವಿವಾದದ ಬಗ್ಗೆ ಸ್ಪಷ್ಟ ಚಿತ್ರಣವನ್ನು ದೇಶದ ಮುಂದಿಡಲಿ ಎಂದು ಗೌಡರು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ರಾತ್ರಿ ಈ ಹಿಂಸಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
 ಚೀನೀ ಸೈನಿಕರು ಎಲ್​ಎಸಿ ಗಡಿಭಾಗದಲ್ಲಿ ಅತಿಕ್ರಮಣ ಮಾಡಿದ್ದರಿಂದ ಗಾಲ್ವನ್ ಕಣಿವೆಯಲ್ಲಿ ಹಲವಾರು ದಿನಗಳಿಂದಲೂ ಪ್ರಕ್ಷುಬ್ದ ವಾತಾವರಣ ಇದೆ. ವಿವಿಧ ಹಂತಗಳಲ್ಲಿ ಮಾತುಕತೆ ನಡೆದ ಬಳಿಕ ಎರಡೂ ಕಡೆಯ ಸೈನಿಕರನ್ನ ಹಿಂಪಡೆಯಲು ನಿರ್ಧರಿಸಲಾಯಿತು. ಅದರಂತೆ ಡೀ ಎಸ್ಕಲೇಶನ್ ಪ್ರಕ್ರಿಯೆ ಆಗಿತ್ತು. ಈ ಸಂದರ್ಭದಲ್ಲೇ ಹಿಂಸಾಚಾರ ಆಗಿರುವುದು ಕಳವಳ ಮೂಡಿಸಿದೆ.