ಚಿತ್ರದುರ್ಗದ ಕೆಎಸ್‍ಆರ್‍ಪಿ ಪೇದೆಗೆ ಕೋವಿಡ್ ಪಾಸಿಟೀವ್ ದೃಢ
ಚಿತ್ರದುರ್ಗ
ಚಿತ್ರದುರ್ಗ ತಾಲ್ಲೂಕು ಸೊಂಡೆಕೊಳ ಗ್ರಾಮದ ಕೆಎಸ್‍ಆರ್‍ಪಿ ನಲ್ಲಿ ಕಾರ್ಯ ನಿರ್ವಹಿಸುವ 27 ವರ್ಷದ ಪೇದೆಗೆ ಕೋವಿಡ್ ಸೋಂಕು ತಗುಲಿರುವುದು ಮೇ. 30 ರಂದು ದೃಢಪಟ್ಟಿದೆ.
ಹಾಸನದ ಕೆಎಸ್‍ಆರ್‍ಪಿ ಬೆಟಾಲಿಯನ್‍ನಲ್ಲಿ ಪೇದೆ ಆಗಿರುವ 27 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಸೋಂಕು ಪೀಡಿತ ಪ್ರದೇಶವಾಗಿರುವ ಅತ್ತಿಬೆಲೆ ಚೆಕ್‍ಪೋಸ್ಟ್‍ನಲ್ಲಿ ಮೇ. 07 ರಿಂದ 17 ರವರೆಗೆ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಮಾಹಿತಿ ಇದ್ದು, ಇವರು ಮೇ. 25 ರಂದು ಸೊಂಡೆಕೊಳ ಗ್ರಾಮಕ್ಕೆ ಬಂದು ಹೋಂ ಕ್ವಾರಂಟೈನ್‍ನಲ್ಲಿ ಇದ್ದರು. ಮೇ. 25 ರಂದೇ ಆರೋಗ್ಯ ಇಲಾಖೆಯಿಂದ ಈತನ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಮೇ. 30 ರಂದು ಈತನ ಪ್ರಯೋಗಾಲಯ ವರದಿ ಪಾಸಿಟೀವ್ ಎಂದು ಬಂದಿದೆ. ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭದಲ್ಲಿ ಈತನ ಪತ್ನಿ ಹಾಗೂ ಮಗು ಮನೆಯಲ್ಲಿ ಇದ್ದ ಕಾರಣಕ್ಕಾಗಿ ಇವರಿಬ್ಬರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಸೋಂಕಿತ ಪೇದೆಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಇವರನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39 ಕ್ಕೆ ಏರಿದಂತಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.