ಬೆಂಗಳೂರು,
ದೇಶದ ಗಡಿ ಭಾಗ ವಿಚಾರದಲ್ಲಿ ತಗಾದೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ದೇಶದ ಉತ್ಪನ್ನ ಬಹಿಷ್ಕರಿಸುವ ಮುನ್ನ ನಾವು ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದು ಬಿಟ್ಟು ಪ್ರಚಾರಕ್ಕೊಸ್ಕರ ಹೇಳಿಕೆಗಳನ್ನು ನೀಡಬಾರದು. ಸದ್ದಿಲ್ಲದೆ ನಮ್ಮ ದೇಶದಲ್ಲೇ ಚೀನಾ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶಿ ಉತ್ಪನ್ಬಗಳ ಉತ್ಪಾದನೆ ಆರಂಭವಾಗಬೇಕು ಎಂದರು.
ಕಳೆದ ಹಲವು ದಿನಗಳಿಂದ ಗಡಿ ಭಾಗದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಉಂಟಾಗುತ್ತಿದೆ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಭಾರತಕ್ಕೆ ಇದು ಸಂಕಷ್ಟದ ಸಮಯ. ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಇದು ಯುದ್ಧ ಮಾಡುವ ಸಮಯ ಅಲ್ಲ ಎಂದು ಇದೇ ವೇಳೆ ತಿಳಿಸಿದರು.
ಮಾತುಕತೆ ಮುಖಾಂತರ ಶಾಂತಿ ಕಾಪಾಡಬೇಕಿದೆ. ಇದು ನನ್ನ ಸಲಹೆ. ಇಂಥ ಸಂದರ್ಭದಲ್ಲಿ ವೀರಾವೇಶದ ಮಾತುಗಳನ್ನು ಆಡಬಾರದು. ಆದಷ್ಟು ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಹುತಾತ್ಮರಾದ ಯೋಧರಿಗೆ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು. ಈ ಸಮಯದಲ್ಲಿ ವೀರಾವೇಶದ ಮಾತುಗಳನ್ನು ಆಡಬಾರದು ಎಂದು ತಿಳಿಸಿದರು.
ಕೋಲಾರ ಭಾಗದಲ್ಲಿ ಪಕ್ಷದ ಸಂಘಟನೆ ಉದ್ದೇಶದಿಂದ ಗೋವಿಂದರಾಜ್ ಅವರಿಗೆ ಪರಿಷತ್ ಚುನಾವಣೆಗೆ ಬಿ. ಫಾರಂ ನೀಡಲಾಗಿದೆ. ಇವರು ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ, ಜತೆಗೆ ಪ್ರಗತಿ ಪರ ರೈತ. ಕೋಲಾರದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದ ಕಾರಣ ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದರು.