ಬೆಂಗಳೂರು:
‘ಜನರ ಸೇವೆ ಮಾಡುವ ನಾವು, ಅವರು ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ’ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕೋಲಾರದಲ್ಲಿ ರೈತ ಮಹಿಳಾ ಕಾರ್ಯಕರ್ತೆಯನ್ನು ಸಚಿವ ಮಾಧುಸ್ವಾಮಿ ಅವರು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು:
‘ಮಾಧುಸ್ವಾಮಿ ಅವರು ಹಿರಿಯ ಮಂತ್ರಿ. ಶಾಸಕಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡು ಬಂದಿರುವವರು. ಅವರು ಈ ರೀತಿ ವರ್ತಿಸಿರುವುದು ಆಶ್ಚರ್ಯ ತಂದಿದೆ.
ಅಧಿಕಾರದಲ್ಲಿರುವವರ ಬಳಿ ಬಂದು ಜನರು ಕಷ್ಟ ಹೇಳಿಕೊಳ್ಳುವುದು ಸಾಮಾನ್ಯ. ಅವರು ಕಷ್ಟ ಹೇಳಿಕೊಳ್ಳಲು ಬಂದಾಗ ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ. ಹೆಣ್ಣು ಮಗಳಾಗಲಿ ಅಥವಾ ಬೇರೆ ಯಾರೇ ಆಗಲಿ, ರಾಜಕಾರಣಿಗಳು, ಅಧಿಕಾರಿಗಳು, ಸಚಿವರ ಬಳಿ ತಮ್ಮ ನೋವು ಹಂಚಿಕೊಳ್ಳಲು ಬಯಸುತ್ತಾರೆ. ಸಚಿವರಿಗೆ ಕಿರಿಕಿರಿ ಆಗಿರಬಹುದು. ಆದರೆ ತಾಳ್ಮೆಯಿಂದ ಆಲಿಸುವುದು ಮುಖ್ಯ. ಅದು ಅವರ ಕರ್ತವ್ಯ. ಅದನ್ನು ಬಿಟ್ಟು, ರಾಸ್ಕಲ್, ಗೆಟ್ ಔಟ್ ಎಂದು ಹೇಳುವುದು ಸದ್ವವರ್ತನೆ ಅಲ್ಲ.
ಮಾಧುಸ್ವಾಮಿ ಅವರು ಸಾರ್ವಜನಿಕವಾಗಿಯಾದರೂ ಕ್ಷಮೆ ಕೇಳಲಿ ಅಥವಾ ನಮ್ಮ ವಿರೋಧ ಪಕ್ಷದ ನಾಯಕರು ಆಗ್ರಹಿಸಿರುವಂತೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಬೇಕಾದರೂ ವಜಾ ಮಾಡಲಿ. ನಾನು ಮಾತ್ರ ನಮ್ಮ ವಿರೋಧ ಪಕ್ಷದ ನಾಯಕರ ಆಗ್ರಹಕ್ಕೆ ಬದ್ಧನಾಗಿದ್ದೇನೆ.’